
ಶಿವಮೊಗ್ಗ :- ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ಜೋಷಿ ಅವರ ವಿರುದ್ಧ ಅನೇಕ ಆರೋಪಗಳು ಕೇಳಿ ಬರುತ್ತಿದ್ದು, ಸರ್ಕಾರ ತಕ್ಷಣವೇ ಈ ಅವ್ಯವಹಾರ ಕುರಿತಂತೆ ಆಯೋಗ ರಚಿಸಿ, ತನಿಖೆ ನಡೆಸಿ ಆತನ ವಿರುದ್ಧ ಕ್ರಮ ತೆಗೆದುಕೊಂಡು ಅಕ್ರಮ ಸಾಬೀತಾದರೆ ತಕ್ಷಣ ವಜಗೊಳಿಸಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಹಿರಿಯ ಸಾಹಿತಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಸಿ. ಸಿದ್ದರಾಮಯ್ಯ ಹೇಳಿದರು.
ಶನಿವಾರ ಬೆಳಿಗ್ಗೆ ಅಂಬೇಡ್ಕರ್ ಭವನದಲ್ಲಿ ಕನ್ನಡ ನಾಡು, ನುಡಿ ಜಗೃತಿ ಸಮಿತಿ ಆಯೋಜಿಸಿದ್ದ ಕನ್ನಡಿಗರ ಜಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ ಕಸಾಪ ಅಧ್ಯಕ್ಷರಾದ ಮೇಲೆ ಜೋಷಿಯವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದ್ದಾರೆ. ಪ್ರಜಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡಿದ್ದಾರೆ. ಪಕ್ಷ ರಾಜಕಾರಣವನ್ನು ತಂದು ಪರಿಷತ್ತನ್ನೇ ಮಾಲಿನ್ಯಗೊಳಿಸಿದ್ದಾರೆ. ಅಷ್ಟೇ ಅಲ್ಲ, ಅವರ ಕಾಲದಲ್ಲಿ ಅನೇಕ ಆರ್ಥಿಕ ಅಶಿಸ್ತು ಉಂಟಾಗಿದೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನಾವು ಸತ್ಯಕ್ಕಾಗಿ ಆಗ್ರಹ ಮಾಡುತ್ತಿದ್ದೇವೆ. ಈ ಎಲ್ಲಾ ಅಕ್ರಮಗಳ ವಿರುದ್ಧ ಸರ್ಕಾರ ಆಯೋಗ ರಚಿಸಿ, ತನಿಖೆ ನಡೆಸಿ ಅಗತ್ಯಕ್ರಮ ಕೈಗೊಳ್ಳಬೇಕು ಎಂದರು.
ಪ್ರಜ ಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಅತೀ ಮುಖ್ಯ. ಅದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕವೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬೆಳೆಸಿಕೊಂಡು ಬಂದಿದ್ದರು. ಪ್ರಭುತ್ವದ ಕಾಲದಲ್ಲಿಯೂ ಅರಮನೆ ಕಹಳೆಯಾಗಿ ಸಾಹಿತ್ಯ ಪರಿಷತ್ತ ಅನ್ನುಬಳಸಿಕೊಂಡಿಲ್ಲ. ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಸಾಹಿತಿಗಳು ಅಲ್ಲದವರು ಇಲ್ಲಿ ಇಡೀ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇಂದಿನ ದುಷ್ಕಾಲ ಸ್ಥಿತಿ ಬಂದಿರಲಿಲ್ಲ. ಆದರೆ ಇಂದು ಸಾಹಿತ್ಯ ಪರಿಷತ್ಗೆ ದುಷ್ಕಾಲ ಬಂದಿದೆ ಎಂದರು.
ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಯಪ್ರಕಾಶ್ ಅವರು ದಿಕ್ಸೂಚಿ ಭಾಷಣ ಮಾಡಿ, ನಮ್ಮ ಹೋರಾಟ ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ದವಲ್ಲ, ನಮ್ಮ ಹೋರಾಟ ಅಲ್ಲಿರುವ ಸರ್ವಾಧಿಕಾರಿ ಅಧ್ಯಕ್ಷರ ವಿರುದ್ದ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಸದಸ್ಯರಿಗೆ ಅರ್ಥವಾಗಬೇಕು ಎಂದರು.
ಸಾಹಿತ್ಯ ಪರಿಷತ್ ಅಂದ್ರೆ ಕನ್ನಡದ ಪ್ರಾತಿನಿಧಿಕ ಸಂಸ್ಥೆ. ಅದರ ಆಶಯ ಕನ್ನಡ ನಾಡು, ನುಡಿಯ ಬಗ್ಗೆ ಜನರು ಎಚ್ಚರಗೊಳಿಸುವ ಸಂಸ್ಥೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಈ ಸಂಸ್ಥೆಯನ್ನು ಕಟ್ಟುವಾಗ ಪ್ರಭುಗಳು ಮತ್ತು ಪ್ರಭು ನಡುವೆ ಸಂಪರ್ಕ ಸೇತುವೆ ಯಾಗಲಿ ಎಂದು ಸ್ಥಾಪಿಸಿದ್ದರು. ಆದರೆ ಇವತ್ತು ಕಸಾಪದ ಅಧ್ಯಕ್ಷರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ಇದು ಕನ್ನಡ ಕಟ್ಟುವ ಕೆಲಸವಾ ಎಂದು ಪ್ರಶ್ನಿಸಿದರು.
ಝೇಂಕಾರದ ಜೋಶಿಯಲ್ಲ, ಈತ ಠೇಂಕಾರದ ಜೋಶಿ, ಠೇಂಕಾರ ಎಂದಿಗೂ ಪ್ರಜಪ್ರಭುತ್ವ ವ್ಯವಸ್ಥೆ ಒಪ್ಪಿಕೊಳ್ಳುವುದಿಲ್ಲ. ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ತನಗೆ ಗುಲಾಮರಂತೆ ಇರಬೇಕೆಂಬುದು ಅವರ. ಧೋರಣೆ. ಇದನ್ನು ಪ್ರಶ್ನಿಸಬಾರದೇ ಎಂದು ಕಸಪಾ ರಾಜಧ್ಯಕ್ಷ ಡಾ.ಮಹೇಶ್ ಜೋಶಿ ವಿರುದ್ಧ ಕಿಡಿಕಾರಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕಸಾಪ ರಾಜಧ್ಯಕ್ಷರಿಗೆ ಅಂಕುಶ ಹಾಕುವ ಕಾಲ ಬಂದಿದೆ. ಅವರನ್ನು ರಾಜಧ್ಯಕ್ಷರನ್ನಾಗಿ ಮಾಡಿದ್ದೇ ವಿಷಾಧನೀಯ. ಪ್ರಜಪ್ರಭುತ್ವದಲ್ಲಿ ಆಯ್ಕೆಯಾದ ಜಿಲ್ಲಾಧ್ಯಕ್ಷರುಗಳಿಗೆ ಇರುವ ಅಧಿಕಾರವನ್ನು ಮೊಟಕುಗೊಳಿಸುವ ಧೋರಣೆ ಖಂಡನೀಯವಾದದ್ದು. ಕಸಾಪವನ್ನು ಇವರು ಕಂಪನಿ ಎಂದು ತಿಳಿದುಕೊಂಡು ದರ್ಬಾರ್ ಮಾಡುತ್ತಿದ್ದಾರೆ ಎಂದರು.
ರೈತನಾಯಕಿ ಸುನಂದಾ ಜಯರಾಮ್ ಮಾತನಾಡಿ, ರಾಜಧ್ಯಕ್ಷರು ಸರ್ವಾಧಿಕಾರಿ ಧೋರಣೆಯನ್ನು ನಿಲ್ಲಿಸಬೇಕು. ನೈತಿಕಹೊಣೆಹೊತ್ತು, ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೆಚ್.ಡಿ. ಕೃಷ್ಣಮೂರ್ತಿ, ಕಸಾಪ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತಿಗೆಯೇ ಕಳಂಕ ತರುತ್ತಿದ್ದಾರೆ. ಯಾವ ಉದ್ದೇಶವಿಲ್ಲದೆ ಸ್ವಾರ್ಥಕ್ಕಾಗಿ ಬೈಲಾ ತಿದ್ದುಪಡಿ ಮಾಡಿದ್ದಾರೆ. ಅವರ ಸರ್ವಾಧಿಕಾರದ ವಿರುದ್ಧವೇ ಈ ಜಗೃತಿ ಸಮಾವೇಶ ಎಂದರು.
ಅಧ್ಯಕ್ಷತೆಯನ್ನು ಪಿ. ಪುಟ್ಟಯ್ಯ ವಹಿಸಿದ್ದರು. ಕಾರ್ಯಕ್ರಮದ ಪ್ರಮುಖ ಸಾಹಿತಿಗಳಾದ ಜಣಗೆರೆ ವೆಂಕಟರಾಮಯ್ಯ, ವಸುಂಧರಾ ಭೂಪತಿ, ಆರ್.ಜಿ. ಹಳ್ಳಿ ನಾಗರಾಜ್, ಮೀರಾ ಶಿವಲಿಂಗಯ್ಯ, ಕಲ್ಕುಳಿ ವಿಠ್ಠಲ್ ಹೆಗಡೆ, ಅಕ್ಷತಾ ಹುಂಚದಕಟ್ಟೆ ಸೇರಿದಂತೆ ಹಲವರಿದ್ದರು.
ಕೆ.ಪಿ. ಶ್ರೀಪಾಲ್ ಸ್ವಾಗತಿಸಿದರು, ಹೊನ್ನಾಳಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
