
ಶಿವಮೊಗ್ಗ :- ಕಾರ್ಮಿಕರಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂಬ ಹೋರಾಟದಿಂದಾಗಿ ಕಾರ್ಮಿಕ ದಿನಾಚರಣೆ ಪ್ರಾರಂಭವಾಯಿತು ಎಂದು ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ.ಎಸ್.ಶಿವಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಎಪಿಎಂಸಿ ಆವರಣದಲ್ಲಿ ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡಿದ್ದ ಮೇ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಆಮೇರಿಕದಲ್ಲಿ ಮೊದಲು ದುಡಿಮೆಗೆ ತಕ್ಕ ಪ್ರತಿಫಲ ನೀಡಬೇಕೆಂಬ ಹೋರಾಟ ಪ್ರಾರಂಭವಾಗಿ ಬಳಿಕ ವಿಶ್ವಸಂಸ್ಥೆಯಿಂದ ಕಾರ್ಮಿಕ ದಿನಾಚರಣೆಯಾಗಿ ಮೇ 1ರಂದು ನಿಗದಿಯಾಯಿತು. ಅಸಂಘಟಿಕತ ಕಾರ್ಮಿಕರಿಗೆ ಇವತ್ತಿಗೂ ಜೀವನದ ಭದ್ರತೆ ಇಲ್ಲ. ಜೀವ ಗಟ್ಟಿ ಇರುವವರೆಗೆ ಮಾತ್ರ ಅವರಿಗೆ ಕೂಲಿ ಸಿಗುತ್ತದೆ. ಕಾರ್ಮಿಕ ಕಾನೂನುಗಳು ಎಲ್ಲರಿಗೂ ಅನ್ವಯವಾಗದೇ ಇರುವುದರಿಂದ ಹಮಾಲಿಗಳು ಇದರಿಂದ ವಂಚಿತರಾಗಿದ್ದಾರೆ. ಸರ್ಕಾರ ನಮಗೂ ನಿವೃತ್ತಿ ವೇತನ ನೀಡಬೇಕು. ಇದು ನಮ್ಮ ಬಹು ವರ್ಷದ ಬೇಡಿಕೆಯಾಗಿದೆ ಶಕ್ತಿಹೀನರಾದರೆ ಯಾರೂ ನಮ್ಮನ್ನು ಮಾತನಾಡಿಸುವುದಿಲ್ಲ. ಆಗಾಗಿ ಹಮಾಲಿ ಕಾರ್ಮಿಕರು ಸಂಘಟಿತರಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಬೇಕು. ಇವತ್ತಿನ ದಿನ ಹಮಾಲಿ ಕಾರ್ಮಿಕರ ಸಂಘದ ಹಬ್ಬದ ದಿನವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಮಣಿ, ಉಪಾಧ್ಯಕ್ಷರಾದ ಶೇಖ್ ಇಮ್ರಾನ್, ಕಾರ್ಯದರ್ಶಿ ಹೆಚ್.ಶಿವಾನಂದಪ್ಪ, ಪ್ರಮುಖರಾದ ಜವೀದ್, ಇಪ್ರಾನ್, ಯಶ್ವಂತ್, ಸಲೀಂ, ಎ.ಪಳನಿ, ಶರವಣ, ಸಂತೋಷ್‌ಕುಮಾರ್, ವೆಂಕಟರಮಣ, ಎಂ.ಕೆ. ಬುಡೇನ್ ಖಾನ್ ಮತ್ತಿತರರು ಇದ್ದರು.
