google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಭಯೋತ್ಪಾದಕತೆ ತಡೆಯಲು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂಬ ವಿಪಕ್ಷಗಳ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರಿಗೂ ಅಭಿನಂದನೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಗ್ರರ ಅಟ್ಟಹಾಸ ಇಡೀ ಜಗತ್ತಿನ ಗಮನಸೆಳೆದಿದ್ದು, ಭಾರತದ ಪ್ರಧಾನಿ ಮೋದಿ ಅವರು ತೆಗೆದುಕೊಂಡ ತೀರ್ಮಾನಕ್ಕೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಸ್ವಾಗತಿಸಿವೆ. ಜೊತೆಗೆವಿರೋಧಪಕ್ಷಗಳು ಕೂಡ ಒಟ್ಟಿಗೆ ನಿಂತಿವೆ. ಇದು ಭಾರತೀಯ ಸಂಸ್ಕತಿ. ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆ ಎಂದರು.

ಪಾಕಿಸ್ತಾನ ಈಗ ಒಂಟಿಯಾಗಿದೆ. ಅದರ ಸಾವನ್ನು ಅದೇ ತಂದುಕೊಳ್ಳುತ್ತದೆ. ಜೀವಂತ ಶವವಾಗುತ್ತಿದೆ. ಇಷ್ಟಾದರೂ ಅದಕ್ಕೆ ಬುದ್ದಿ ಬಂದಿಲ್ಲ. ಒಂದು ಕಡೆ ಈ ಘಟನೆ ನೋವು ತಂದರೆ ಮತ್ತೊಂದು ಕಡೆ ಇಡೀ ಹಿಂದೂ ಸಮಾಜ ಮತ್ತೆ ಮತ್ತೆ ಒಟ್ಟಾಗುವುದನ್ನು ನಾವು ಕಾಣುತ್ತೇವೆ. ಹಿಂದೂಗಳೆಲ್ಲ ಒಂದೇ ಎಂದು ಈಗ ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ ಎಂದರು.

ಪಾಕಿಸ್ತಾನದ ವಿರುದ್ಧ ಮೋದಿ ಅವರು ಪ್ರಪಂಚವೇ ಮೆಚ್ಚುವ ನಿರ್ಧಾರ ತೆಗೆದುಕೊಂಡಿದ್ದಾರೆ. ಮೊದ ಮೊದಲು ಅನೇಕ ರಾಷ್ಟ್ರಗಳು ಮೋದಿ ಅವರನ್ನು ವಿರೋಧಿಸುತ್ತಿದ್ದವು. ಈಗ ಪ್ರಧಾನಿ ಮೋದಿ ಅವರು ಪ್ರಪಂಚವನ್ನೇ ಮೆಚ್ಚಿಸಿದ್ದಾರೆ. ತಾನು ಸಿದ್ಧಾಂತದ ನಾಯಕ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಹಲವು ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸ್ವಾಗತವೇ ಆಗಿದೆ. ಇಂತಹ ಸಂದರ್ಭಗಳು ಬಂದಾಗ ನಾವೆಲ್ಲರೂ ಒಟ್ಟಾಗಬೇಕಾಗಿದ್ದು ಅನಿವಾರ್ಯ. ಈ ಹಿಂದೆ ಇಂದಿರಾಗಾಂಧಿಯವರು ಇಂತಹುದೇ ಯುದ್ಧ ಸಾರಿದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು ಮೆಚ್ಚಿಕೊಂಡು ಅವರ ನಿರ್ಧಾರಕ್ಕೆ ನಮ್ಮ ಸ್ವಾಗತವಿದೆ. ಆಕೆ ದೇಶ ಕಾಪಾಡುವ ದುರ್ಗೆ ಎಂದಿದ್ದನ್ನು ನಾವು ಮರೆಯಬಾರದು. ಹಾಗಾಗಿ ಮೋದಿಯವರ ಎದೆಗಾರಿಕೆಯ ಈ ನಿರ್ಧಾರ ಭಾರತದ 140 ಕೋಟಿ ಜನರ ನಿರ್ಧಾರವಾಗಿದೆ ಎಂದರು.

ಶಿವಮೊಗ್ಗದ ಮಂಜುನಾಥ್ ರಾವ್ ಸೇರಿದಂತೆ ಕರ್ನಾಟಕದ ಮೂವರು ಬಲಿಯಾಗಿದ್ದಾರೆ. ರಾಜ್ಯ ಸರ್ಕಾರ ಇವರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಅದನ್ನು 25 ಲಕ್ಷಕ್ಕೆ ಹೆಚ್ಚಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಬಾಲು, ಶ್ರೀಕಾಂತ್, ಮೋಹನ್ ಜಧವ್, ನಾಗರಾಜ್, ಜಗದೀಶ್, ಸೋಗಾನೆ ರಮೇಶ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *