
ಬೆಂಗಳೂರು :- ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 22ರಂದು 7,8,9ನೇ ತರಗತಿ ಪರೀಕ್ಷೆಗಳ ನಿಗದಿಯಾಗಿದೆ. ಬಂದ್ ಎಂದು ಈಗ ಮುಂದೂಡಿಕೆ ಸಾಧ್ಯವಿಲ್ಲ. ಬಂದ್ ಇದ್ದರೂ ಯಾವುದೇ ಪರೀಕ್ಷೆ ಮುಂದೂಡಿಕೆ ಮಾಡುವುದಿಲ್ಲ. ಪರೀಕ್ಷೆ ಅದರ ಪಾಡಿಗೆ ನಡೆಯಲಿದೆ ಎಂದು ಹೇಳಿದರು.
ಮಕ್ಕಳಿಗೆ ಯಾವುದೇ ತೊಂದರೆ ಆಗದ ರೀತಿ ಸಹಕಾರ ನೀಡಬೇಕೆಂದು ಹೋರಾಟಗಾರರಿಗೆ ಮನವಿ ಮಾಡುತ್ತೇನೆ. ಹೋರಾಟ ಮಾಡೋಕೆ ನಿಮಗೆ ಹಕ್ಕು ಇದೆ. ಆದರೆ ಪರೀಕ್ಷೆ ಮಕ್ಕಳಿಗೆ ಬಹಳ ಮುಖ್ಯವಾದದ್ದು. ಮಕ್ಕಳ ಭವಿಷ್ಯ ಪರೀಕ್ಷೆಯಲ್ಲಿದೆ. ಮಕ್ಕಳ ಭವಿಷ್ಯಕ್ಕೆ ಯಾವುದೇ ಅಡಚಣೆ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಬಂದ್ ಮಾಡುವ ಹೋರಾಟ ಗಾರರು ಪರೀಕ್ಷೆಗೆ ಹೋಗಬೇಡಿ ಎಂದು ಮಕ್ಕಳಿಗೆ ಹೇಳುವುದಿಲ್ಲ. ಮಕ್ಕಳು ಗೊಂದಲಕ್ಕೀಡಾಗುವುದು ಬೇಡ. 6,7,8,9ನೇ ತರಗತಿ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತವೆ. ಮಕ್ಕಳು ಪರೀಕ್ಷೆ ಬರೆಯಲಿ. ಈಗಾಗಲೇ ವೇಳಾಪಟ್ಟಿ ಸಿದ್ಧತೆ ಮಾಡಿ ಪ್ರಕಟ ಮಾಡಿದ್ದೇವೆ. ವೇಳಾಪಟ್ಟಿ ಬದಲಾವಣೆ ಆದರೆ, ಕಷ್ಟ ಆಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಿಕೆ ಸರಿಯಲ್ಲ ಎಂದರು.
ಇದೇ ವೇಳೆ ೬ವರ್ಷದ ನಿಯಮ ವಿಚಾರ ಕುರಿತು ಮಾತನಾಡಿದ ಅವರು, ೬ ವರ್ಷದ ನಿಯಮ ಸಡಿಲಿಕೆ ಸಾಧ್ಯವಿಲ್ಲ. ಇದರಲ್ಲಿ ನಾನೇನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಕೂಡಾ ಅವರ ಅರ್ಜಿ ವಜ ಮಾಡಿದೆ. ನ್ಯಾಯಾಲಯ ಏನೇ ಆದೇಶ ಕೊಟ್ಟರೂ ಅದನ್ನು ಪಾಲನೆ ಮಾಡುತ್ತೇವೆಂದು ಹೇಳಿದರು.
6 ವರ್ಷದ ನಿಯಮದಿಂದ ಬೇಸವಾಗುತ್ತದೆ ನಿಜ. ಆದರೆ ನಿಯಮದ ಪ್ರಕಾರ ನಾವು ನಡೆಯಬೇಕು. 1 ತಿಂಗಳು, 2 ತಿಂಗಳು ಕಡಿಮೆ ಇರುವವರಿಗೆ ಕೊಟ್ಟರೆ ಮತ್ತೊಬ್ಬರು ಕೇಳುತ್ತಾರೆ. ಇದೆಲ್ಲವೂ ಬಹಳ ಚರ್ಚೆ ಆಗುವ ವಿಷಯ. ಎಷ್ಟೋ ಪೋಷಕರು 7ದಿನ ಕಡಿಮೆ ಅಂತಿದ್ದಾರೆ. ಆದರೆ, ಅದು ಕಾನೂನಿನಲ್ಲಿ ಇಲ್ಲ. ನಾವು ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ಈಗ ಈ ವಿಷಯ ಕೋರ್ಟ್ ನಲ್ಲಿದೆ. ಕೋರ್ಟ್ ನಲ್ಲಿ ನಿರ್ಧಾರ ಬಂದರೆ ನಾವು ತೀರ್ಮಾನ ಮಾಡಬಹುದು. ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇವೆಂದರು.
