google.com, pub-9939191130407836, DIRECT, f08c47fec0942fa0

ಬೆಂಗಳೂರು :- ಅಪ್ಪ, ಅಮ್ಮ ಕಟ್ಟಿದ್ದ ಹಳೆಯ ಕಾಲದ ಮನೆಯನ್ನು ಕೆಡವಿ ಹೊಸ ಮನೆಯನ್ನು ನಿಮಾಣ ಮಾಡುವುದು ಸರ್ವೇ ಸಾಮಾನ್ಯ. ಹೆತ್ತವರು ಬಾಳಿ ಬದುಕಿದ ಮನೆ ಎಂಬ ಭಾವನೆಗಳಿಗೆ ಆಧುನಿಕ ಕಾಲದಲ್ಲಿ ಅವಕಾಶವೇ ಇಲ್ಲ. ಸಾಫ್ಟ್ ವೇರ್ ಕಂಪನಿಗಳಲ್ಲಿ ಕೈತುಂಬ ದುಡಿಯುವ ಮಕ್ಕಳಿಗೆ ಐಷಾರಾಮಿ ಮನೆ ಬೇಕು ಎಂಬ ಆಸೆಯಿಂದ ಹಳೆಯ ಕಾಲದ ಮನೆಯನ್ನು ಕೆಡವಿ ಹೊಸದಾಗಿ ಅನುಕೂಲಕ್ಕೆ ತಕ್ಕಂತೆ ಕಟ್ಟಿಕೊಳ್ಳುವುದು ಸಹಜ. ಆದರೆ ಈ ಮಕ್ಕಳು ಅಪರೂಪ ಎಂಬಂತೆ ಕೈತುಂಬಾ ಹಣವಿದ್ದರೂ ಮನೆಯನ್ನು ಕೆಡವದೆ ಹೆತ್ತ ಅಮ್ಮನ ಕೋರಿಕೆಯಂತೆ ಹಳೆಯ ಮನೆಯನ್ನೇ ನೂರು ಅಡಿಗಳಷ್ಟು ಲಿಫ್ಟ್ ಮಾಡಿ ಮನೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ.

ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬಿಇಎಂಎಲ್ ಲೇಔಟ್ ನಲ್ಲಿರುವ ಯಲ್ಲಮ್ಮ ಅವರ ಮನೆ ಮಳೆಗಾಲ ಬಂತೆಂದರೆ ನೀರಿನಿಂದ ತುಂಬಿಕೊಳ್ಳುತ್ತಿತ್ತು. ಮನೆಯೊಳಗೆ ಹರಿದು ಎರಡರಿಂದ ಮೂರು ಅಡಿಗಳಷ್ಟು ಮಳೆ ನೀರು ನಿಲ್ಲುತ್ತಿತ್ತು. ಆದ್ದರಿಂದ ಮಕ್ಕಳು ಈ ಮನೆಯನ್ನು ಕೆಡವಿ ಹೊಸ ಮನೆಯನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಿದ್ದರು. ಆದರೆ ತಾಯಿ ಯಲ್ಲಮ್ಮ, ನಾನು ನಿಮ್ಮ ಅಪ್ಪ ಹೊಟ್ಟೆ ಬಟ್ಟೆ ಕಟ್ಟಿ ಕಷ್ಟಪಟ್ಟು ಈ ಮನೆಯನ್ನು ಕಟ್ಟಿದ್ದೇವೆ ಎಂದು ನೋವು ತೊಡಿಕೊಂಡಿದ್ದಾರೆ. ಅಮ್ಮನ ಮಾತಿಗೆ ಬೆಲೆ ಕೊಟ್ಟ ಮಕ್ಕಳು ಮನೆಯನ್ನು ನೀರಿನಿಂದ ರಕ್ಷಿಸಿಕೊಳ್ಳಲು, ಮನೆಯನ್ನು ಕೆಡವುದಕ್ಕೆ ಬದಲಾಗಿ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.

ಮನೆ ಶಿಫ್ಟ್ ಮಾಡಲಿರುವ ಬಿಹಾರ ಮೂಲದ ಕಂಪನಿ:

ಮಳೆಗಾಲದಿಂದ ಮನೆಯನ್ನು ರಕ್ಷಿಸಿಕೊಳ್ಳಲು ಕನಿಷ್ಟ 100 ಅಡಿಗಳಷ್ಟು ಸ್ಥಳಾಂತರ ಮಾಡಬೇಕಿತ್ತು. ಈ ಕೆಲಸವನ್ನು ಬಿಹಾರ ಮೂಲದ ಶ್ರೀರಾಮ್ ಹೌಸ್ ಲಿಫ್ಟಿಂಗ್ ಅಂಡ್ ಶಿಫ್ಟಿಂಗ್ ಕಂಪನಿಗೆ ವಹಿಸಿಕೊಂಡಿದೆ. ಕಂಪನಿ ಇಂಜಿನಿಯರ್ ಗಳು ಆಗಮಿಸಿ ಪರಿಶೀಲಿಸಿ ಮನೆಯನ್ನು ನೂರು ಅಡಿಗಳಷ್ಟು ಹಿಂದಕ್ಕೆ ಸ್ಥಳಾಂತರ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ಶ್ರೀರಾಮ್ ಕಂಪನಿ ಈಗಾಗಲೇ ಬೇರೆ ಬೇರೆ ನಗರಗಳಲ್ಲಿ ಮನೆಗಳನ್ನು ಸ್ಥಳಾಂತರಿಸಿದ್ದು ಸಾಕಷ್ಟು ಪರಿಣಿತಿ ಹೊಂದಿದೆ. ಈ ಕಂಪನಿ ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಎರಡು ಅಂತಸ್ತಿನ ಮನೆಯನ್ನು ಲಿಫ್ಟ್ ಮಾಡಲು ಮುಂದಾಗಿದೆ.

ಇಡೀ ಮನೆಯನ್ನು ಸ್ಥಳಾಂತರಿಸಲು 200 ಕಬ್ಬಿಣದ ಜಾಕ್ ಮತ್ತು 100 ಕಬ್ಬಿಣದ ರೋಲರ್ ಗಳನ್ನು ಬಳಕೆ ಮಾಡಲಾಗುತ್ತಿದೆ. ದಶಕಗಳ ಹಿಂದೆ ಕೇವಲ ರೂ. 13 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಮನೆಯ ಶಿಫ್ಟಿಂಗ್ ವೆಚ್ಚ 10 ಲಕ್ಷ ರೂಪಾಯಿ! ಇದೇ ಮನೆಯನ್ನು ಈಗ ಕಟ್ಟಲು ಏನಿಲ್ಲ ಎಂದರೂ ಅಂದಾಜು 70-80 ಲಕ್ಷ ರೂ. ಬೇಕೇಬೇಕು. ಸಧ್ಯಕ್ಕೆ ಮನೆಯನ್ನು 15 ಅಡಿ ಹಿಂದಕ್ಕೆ ಲಿಫ್ಟ್ ಮಾಡಲಾಗಿದೆ. ಮುಂದಿನ ಒಂದು ತಿಂಗಳಲ್ಲಿ 85 ಅಡಿಗಳಷ್ಟು ಹಿಂದಕ್ಕೆ ಲಿಫ್ಟ್ ಮಾಡಲಾಗುತ್ತದೆ ಎಂದು ಶ್ರೀರಾಮ್ ಕಂಪನಿಯ ಇಂಜಿನಿಯರ್‌ಗಳು ಹೇಳಿದ್ದಾರೆ.

ಬೀದಿ ಬೀದಿಯಲ್ಲಿ ಸೊಪ್ಪು ಮಾರಾಟ ಮಾಡಿ ನಾನು ನನ್ನ ಪತಿ ಈ ಮನೆಯನ್ನು ಕಟ್ಟಿಸಿದ್ದೇವೆ. ಆದರೆ ಮಳೆಗಾಲದಲ್ಲಿ ನೀರಿನಿಂದ ತುಂಬಿಕೊಳ್ಳುತ್ತಿತ್ತು.ಹಾಗಾಗಿ ಮಕ್ಕಳು ಕೆಡವಿ ಹೊಸ ಮನೆ ಕಟ್ಟು ಮುಂದಾಗಿದ್ದರು. ನನ್ನ ಆಸೆಯಂತೆ ಮನೆಯನ್ನು ಉಳಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ಯಲ್ಲಮ್ಮ ಹೇಳಿದ್ದಾರೆ.

Leave a Reply

Your email address will not be published. Required fields are marked *