ಶಿವಮೊಗ್ಗ :- ಸ್ಥಳೀಯ ಜನರ ಸಹಭಾಗಿತ್ವ ಇಲ್ಲದೆಯೆ ಯಾವುದೇ ಪರಿಸರ ಯೋಜನೆ ಯಶಸ್ವಿಯಾಗುವುದಿಲ್ಲ. ಸ್ಥಳೀಯ ಜನರ ವಿಶ್ವಾಸ ಪಡೆಯುವ ಸೌಜನ್ಯತೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ತೋರಬೇಕಿದೆ ಎಂದು ಖ್ಯಾತ ಪರಿಸರ ತಜ್ಞ ಕಲ್ಕುಳಿ ವಿಠ್ಠಲಹೆಗಡೆ ಅಭಿಪ್ರಾಯಪಟ್ಟರು.
ಶುಕ್ರವಾರ ಜಿಲ್ಲಾ 19 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಲೆನಾಡು ಬದುಕಿನ ಸವಾಲುಗಳು ಕುರಿತ ಗೋಷ್ಟಿಯಲ್ಲಿ ಮಾತನಾಡಿದರು.
ಖಾಕಿ ಬಟ್ಟೆ ಹಾಕಿದವರನ್ನೆಲ್ಲ ನೋಡಿದರೆ ಹೆದರುವ ಪರಿಸ್ಥಿತಿ ಮಲೆನಾಡಿನ ಜನರಲ್ಲಿದೆ. ಯಾವಾಗ ಯಾರು ತಮ್ಮ ಮನೆಗಳನ್ನು ತೆರೆವುಗೊಳಿಸುತ್ತಾರೆ ಎಂಬ ಭಯದಲ್ಲಿಯೆ ಬದುಕುವ ಹಾಗಾಗಿದೆ. ಈ ಒತ್ತುವರಿ ಎಂಬ ಸಮಸ್ಯೆ ಶುರುವಾಗಿದ್ದೆ ಗೊದಾವರ್ಮನ್ ಕೇಸ್ ನಿಂದ. ಅರಣ್ಯ ಇಲಾಖೆ ಕಾಡಿನ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಒಂದು ಸಾರ್ವಜನಿಕ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಭೂಮಿ ನೀಡಲಾಗದ ಪರಿಸ್ಥಿತಿ ಇದೆ. ಎಲ್ಲವು ಕೇಂದ್ರ ಸರ್ಕಾರದ ಹಸಿರು ಪೀಠದ ಅನುಮತಿ ಪಡೆಯಬೇಕು. ಈ ಬಗ್ಗೆ ವಾದ ಮಾಡಬೇಕಾದ ರಾಜ್ಯದ ಸಂಸದರುಗಳಿಗೆ ತಿಳುವಳಿಕೆ ಮತ್ತು ಬದ್ದತೆಯಿಲ್ಲದಂತೆ ವರ್ತಿಸುತ್ತಿದ್ದಾರೆ.
ವನ್ಯಜೀವಿ ಮತ್ತು ಮಾನವ ಸಂಘರ್ಷ ಜಾಸ್ತಿಯಾಗುತ್ತಿದೆ. ಆನೆಯ ಸ್ವಭಾವ ಗೊತ್ತಿಲ್ಲದ ಪ್ರದೇಶದಲ್ಲಿ ಆನೆಗಳು ಸಂಚರಿಸುತ್ತಿರುವುದು ಅಪಾಯಕಾರಿಯಾಗಿದೆ. ಆನೆಯ ಪಥವನ್ನು ಬದಲಾಯಿಸಲು ಯಾರಿಂದಲು ಸಾಧ್ಯವಿಲ್ಲ. ಆನೆಗಳ ನೆಲೆಯು ಹೇಮಾವತಿ ಡ್ಯಾಂನಲ್ಲಿ ಮುಳುಗಿ ಹೋಗಿದ್ದರಿಂದ, ಎಲ್ಲೆಂದರಲ್ಲಿ ಆನೆಗಳ ಓಡಾಟ ಕಾಣುತ್ತಿದೆ. ಆನೆಗಳಿಂದ ಸಾವಿಗೀಡಾದವರಿಗೆ ಪರಿಹಾರ ನೀಡಿ ಹೆಚ್ಚುಗಾರಿಕೆ ತೋರುವ ಜೊತೆಗೆ, ಪ್ರಾಣಿಗಳಿಗೆ ನೈಸರ್ಗಿಕ ನೆಲೆ ನೀಡುವ ಪ್ರಯತ್ನ ನಡೆಯಬೇಕಿದೆ.
ಇಡೀ ಪಶ್ಚಿಮಘಟ್ಟ ಜಾಗತಿಕ ತಾಪಮಾನವನ್ನು ಸಂಪೂರ್ಣ ಸರಿಮಾಡುತ್ತದೆ ಎಂಬುದು ಸುಳ್ಳು. ಯಾವುದೇ ಪರಿಸರದಲ್ಲಿ ಆಗುವ ಘಟನೆಗಳಿಗೆ ಮಲೆನಾಡಿಗರು ಕಾರಣ ಎಂದು ಬೆಟ್ಟು ಮಾಡಿ ತೋರಿಸುವುದು ಸರಿಯಲ್ಲ. ಪಟ್ಟಣದ ಜನಕ್ಕೆ ಇಪ್ಪತ್ನಾಲ್ಕು ಗಂಟೆ ಕರೆಂಟು, ಇಂಧನ, ಪೆಟ್ರೋಲ್ ಗಳು ಸಿಗಬೇಕು ಎಂದು ಅಪೇಕ್ಷೆ ಪಡುವಾಗ, ನೀವು ಬಳಸುತ್ತಿರುವ ಕಲ್ಲಿದ್ದಲು, ಪೆಟ್ರೋಲ್ ಗಳು ಕಾರಣ ಎಂಬ ಅರಿವೆ ಇಲ್ಲದಂತೆ ಬಳಸುತ್ತಿದ್ದೇವೆ. ಇದರಿಂದ ಪರಿಸರ ಮಾತ್ರವಲ್ಲ, ಸಮುದ್ರವು ಕಲಿಷಿತಗೊಂಡು ಭೂಮಿಗೆ ಕಂಟಕವಾಗಿದೆ. ಭೂಮಿಯ ನಿಜವಾದ ಆರೋಗ್ಯ ನಿಂತಿರುವುದೆ ಸಮುದ್ರದಿಂದ ಎನ್ನುವ ವಾಸ್ತವತೆಯ ಜ್ಞಾನ ಇಲ್ಲದವರಂತೆ ಬದುಕುತ್ತಿದ್ದೇವೆ. ಇಷ್ಟೆಲ್ಲದರ ನಡುವೆ ಮಲೆನಾಡಿಗರು, ಕೃಷಿ ಬಳಕೆಗಾಗಿ ಮಾಡಿದ ಒತ್ತುವರಿದಾರರು ಜಾಗತಿಕ ತಾಪಮಾನಕ್ಕೆ ಕಾರಣ ಎಂದು ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.
ಗೋಷ್ಟಿಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಜೆ.ಕೆ.ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಉಪಸ್ಥಿತರಿದ್ದರು.
