google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಪ್ರತಿಷ್ಠಿತ ಶಿವಮೊಗ್ಗ ಹೌಸಿಂಗ್-ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಸ್.ಕೆ. ಮರಿಯಪ್ಪ, ಉಪಾಧ್ಯಕ್ಷರಾಗಿ ಸಿ. ಹೊನ್ನಪ್ಪ ಮತ್ತು ಖಜಾಂಚಿಯಾಗಿ ಕೆ. ರಂಗನಾಥ್ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ , ಉಪಾಧ್ಯಕ್ಷ ಮತ್ತು ಖಜಂಚಿ ಸ್ಥಾನಗಳ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಎಸ್.ಕೆ. ಮರಿಯಪ್ಪ ಅವರ ತಂಡಕ್ಕೆ ಜಯ ಲಭಿಸಿದ್ದು, ಪ್ರತಿಸ್ಪರ್ಧಿಗಳಾಗಿದ್ದ ಉಮಾಶಂಕರ್ ಉಪಾಧ್ಯಾಯ ತಂಡ ಪರಾಭವಗೊಂಡಿದೆ. ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಪದಾಧಿಕಾರಿಗಳ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆಯುತ್ತಿದ್ದ ಸಂಪ್ರದಾಯ ಈ ಬಾರಿ ಮುರಿದುಬಿದ್ದಿದಂತಾಗಿದೆ.

15 ಜನ ನಿರ್ದೇಶಕರಲ್ಲಿ ಎಸ್.ಕೆ. ಮರಿಯಪ್ಪಅವರ ತಂಡದಲ್ಲಿ 8 ಮತ್ತು ಉಮಾಶಂಕರ್ ಉಪಾಧ್ಯಾಯ ತಂಡದಲ್ಲಿ 7 ನಿರ್ದೇಶಕರು ಗುರುತಿಸಿಕೊಂಡಿದ್ದು ಎರಡೂ ಬಣಗಳು ತಮ್ಮಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸಿದ್ದವು. ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷ, ಖಜಂಚಿ ಸ್ಥಾನಗಳ ಚುನಾವಣೆಯಲ್ಲಿ ಅವಿರೋಧ ಆಯ್ಕೆಯ ಪ್ರಯತ್ನ ಕೊನೆಗೂ ವಿಫಲವಾದ ಹಿನ್ನಲೆಯಲ್ಲಿ ಮತದಾನ ನಡೆಸಲಾಯಿತು.

ಎಸ್.ಕೆ. ಮರಿಯಪ್ಪ ಅವರ ಸಿಂಡಿಕೇಟ್ ನಲ್ಲಿ ನಿರ್ದೇಶಕರಾಗಿದ್ದ ಶ್ರೀನಿವಾಸ್ ಕರಿಯಣ್ಣ, ಉಮಾಶಂಕರ್ ಉಪಾಧ್ಯಾಯ ಪಾಳೆಯಕ್ಕೆ ಜಿಗಿದಿದ್ದರಿಂದ ಬಿರುಸಿನ ಪೈಪೋಟಿಯೇ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಕೆ. ಮರಿಯಪ್ಪ ಅವರು 9 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಉಮಾಶಂಕರ್ ಉಪಾಧ್ಯಾಯ 6ಮತಗಳು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೊನ್ನಪ್ಪಮತ್ತು ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ. ರಂಗನಾಥ್ ಅವರು ತಲಾ 8 ಮತಗಳನ್ನು ಪಡೆದರು. ಎದುರಾಳಿ ತಂಡದ ವೇದಾವತಿ, ನಟರಾಜ ಶಾಸ್ತ್ರಿ ತಲಾ 7 ಮತಗಳನ್ನು ಗಳಿಸಿದರು.

Leave a Reply

Your email address will not be published. Required fields are marked *