ಶಿವಮೊಗ್ಗ :- ಸಹಕಾರ ಸಂಘಗಳು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುತ್ತವೆ ಎಂದು ಡಿಸಿಸಿ ಬ್ಯಾಂಕ್ ಹಾಗೂ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.
ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶ್ರೀಭಗಿರಥ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ೧೧೯ ವರ್ಷಗಳ ಹಿಂದೆಯೇ ಸಹಕಾರ ಸಂಘ ಆರಂಭಗೊಂಡಿತು. ಅಂದಿನ ಹಿರಿಯರು ಬಡವರ ಮೇಲಿನ ಸಾಲದ ಹೊರೆಯನ್ನು ತಗ್ಗಿಸಲು ಮತ್ತು ಸಾಹುಕಾರರ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಈ ಸಂಘವನ್ನು ಸ್ಥಾಪಿಸಲಾಯಿತು. ಆದರೆ ಇಂದು ಇದು ದೇಶದಲ್ಲೇಯೇ ಆರ್ಥಿಕ ಬದ್ಧತೆಯನ್ನು ಒದಗಿಸಿದೆ ಎಂದರು.
ವಾಣಿಜ್ಯ ಬ್ಯಾಂಕ್‌ಗಳು ಬಂಡವಾಳಶಾಹಿಗಳತ್ತ ಮುಖ ಮಾಡುತ್ತಿವೆ. ಆದರೆ ಸಹಕಾರ ಸಂಘಗಳು ಬಡವರತ್ತ ಸಾಗಿವೆ. ಎನ್. ಮಂಜುನಾಥ್ ಅವರು ತಮ್ಮ ಭಗಿರಥ ಪ್ರಯತ್ನದಿಂದ ಸಹಕಾರ ಸಂಘವನ್ನು ಕಟ್ಟಿದ್ದಾರೆ. ಇದಕ್ಕಾಗಿ ಅವರು ಬಹಳ ಕಷ್ಟ ಪಟ್ಟಿದ್ದಾರೆ. ಒಂದು ಸಹಕಾರ ಸಂಘದ ಉದ್ಘಾಟನಾ ಸಮಾರಂಭಕ್ಕೆ ಇಷ್ಟೊಂದು ಜನರು ಭಾಗವಹಿಸುರುವುದು ಇದೇ ಮೊದಲು ಎಂದರು.
ಪ್ರತಿಭಾ ಪುರಸ್ಕಾರ ನೆರವೇರಿಸಿದ ಶಾಸಕ ಡಾ. ಧನಂಜಯ ಸರ್ಜಿ ಮಾತನಾಡಿ, ಪ್ರತಿಯೊಬ್ಬರು ಜೀವನದಲ್ಲಿ ಮುಂದೆ ಬರಬೇಕಾದರೆ ಹಾಗೂ ಯಶಸ್ಸನ್ನು ಸಾಧಿಸಬೇಕಾದರೆ ಭಗೀರಥ ಪ್ರಯತ್ನ ಮಾಡಲೇಬೇಕು. ಒಂದು ಸಮಾಜ ಮುಂದೆ ಬರಬೇಕಾದರೆ ಅಥವಾ ಉನ್ನತಿಯನ್ನು ಕಾಣಬೇಕಾದರೆ ಆ ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗಬೇಕು ಎಂದರು.
ಲೋಗೋ ಬಿಡುಗಡೆ ಮಾಡಿದ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಆರ್ಥಿಕ ಶಕ್ತಿ ನೀಡುವ ಸಂಸ್ಕೃತಿ ಭಾರತೀಯರ ಪ್ರತೀಕ. ಅನಾದಿಕಾಲದಿಂದಲೂ ನಮ್ಮಲ್ಲಿ ಆರ್ಥಿಕ ಸಹಕಾರವನ್ನು ನೀಡುವಂತಹ ಪದ್ದತಿ ಇದೆ. ಅದರ ಮುಂದುವರಿದ ಭಾಗವೇ ಸಹಕಾರ ಸಂಘಗಳು ಎಂದು ಹೇಳಿದರು.
ಸಂಘದ ಅಧ್ಯಕ್ಷ ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ಮಾಡುವುದು ಎಷ್ಟೊಂದು ಕಷ್ಟ ಎಂದು ಅರ್ಥವಾಗುತ್ತಿದೆ. ಸಮಾಜದ ಜನರ ಬಹುದಿನದ ಕನಸಾದ ಈ ಸಂಘ ಇಂದು ನನಸಾಗಿದೆ ಎಂದರು.
ಸಮಾರಂಭದಲ್ಲಿ ೫೦ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ದಂಪತಿಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಗ್ರಾಮಾಂತರ ಶಾಸಕಿ ಶಾರದಾಪೂರ್‍ಯಾನಾಯ್ಕ್, ನಿವೃತ್ತ ನ್ಯಾಯಾಧೀಶ ಬಿಲ್ಲಪ್ಪ, ಜಗನ್ನಾಥ್ ಸಾಗರ್, ಸಂಘದ ಉಪಾಧ್ಯಕ್ಷ ವಸಂತ್ ಹೋಬಳಿದಾರ್, ನಿರ್ದೇಶಕರಾದ ಸುಧಾಕರ್, ರವಿ, ಲೋಕೇಶ್, ಹನುಮಂತಪ್ಪ, ವೆಂಕಟೇಶ್, ರಮೇಶ್ , ಶ್ರೀನಿವಾಸ್, ಶಾಂತಮ್ಮ, ಅರ್ಚನ ಇನ್ನಿತರರಿದ್ದರು.