
ಶಿವಮೊಗ್ಗ :-ಮಕರ ಸಂಕ್ರಾಂತಿ ಹಬ್ಬದಂದು ಸಾವಿರಾರು ಜನ ಕೂಡ್ಲಿಯಲ್ಲಿ ಪುಣ್ಯ ಸ್ನಾನ ಮಾಡಲು ಬರುತ್ತಾರೆ. ಹಾಗೆ ಬಂದ ಜನರಲ್ಲಿ ನದಿಯ ಪಾವಿತ್ರ್ಯತೆ ಮತ್ತು ಶುದ್ಧತೆಯ ಅರಿವು ಮೂಡಿಸಲು ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ವರದಶ್ರೀ ಫೌಡೇಶನ್ ಜೊತೆಗೂಡಿ ನಿರ್ಮಲ ತುಂಗಭದ್ರಾ ಅಭಿಯಾನದ ತಂಡ, ಕೂಡ್ಲಿ ಗ್ರಾ.ಪಂ. ಹಾಗೂ ಹಲವು ಸಂಘ ಸಂಸ್ಥೆಗಳ ನೆರವಿನಲ್ಲಿ ನಡೆಯಲಿದೆ ಎಂದು ಸಂಚಾಲಕ ಬಿ.ಎಂ. ಕುಮಾರಸ್ವಾಮಿಯವರು ತಿಳಿಸಿದರು.
ಕೂಡ್ಲಿ ಗ್ರಾ.ಪಂ. ನಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ನದಿ ನೀರಿಗೆ ಶಾಂಪೂ, ಸಾಬೂನು ಮುಂತಾದ ರಾಸಾಯನಿಕಗಳನ್ನು ಸೇರಿಸದೆ ಪುಣ್ಯಸ್ನಾನ ಮಾಡುವ ಕುರಿತು ಜನರಲ್ಲಿ ಜಗೃತಿ ಮೂಡಿಸಿ ನದಿಯ ನೀರನ್ನು ಕಾಪಾಡೋಣ ಎಂದರು. ಮತ್ತೋರ್ವ ಮುಖಂಡರಾದ ಎಂ. ಶಂಕರ್ ರವರು ಸ್ನಾನ ಘಟ್ಟದಲ್ಲಿ ಸ್ನಾನ ಮಾಡುವವರು ಬಟ್ಟೆಗಳನ್ನು ನದಿಗೆ ಎಸೆಯದೆ, ಅವುಗಳನ್ನು ಅದಕ್ಕಾಗಿ ನಿರ್ಮಿಸುವ ಜಗದಲ್ಲಿ ಹಾಕಬೇಕೆಂದು ವಿನಂತಿಸಿದರು.
ಜ. 14ರ ನಾಳೆ ಬೆಳಿಗ್ಗೆ 6.30ಕ್ಕೆ ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ರವರು ಹಾಗೂ ಶಾಸಕರಾದ ಡಾ. ಧನಂಜಯ ಸರ್ಜಿ ಯವರು ಅಭಿಯಾನಕ್ಕೆ ಚಾಲನೆ ನೀಡುವರು. ವರದಶ್ರೀ ಫೌಂಡೇಶನ್ ಇಪ್ಪತ್ತೈದು ಸಾವಿರ ಕಡ್ಲೆ ಪುಡಿಯ ಪ್ಯಾಕ್‌ಗಳನ್ನು ಉಚಿತವಾಗಿ ನೀಡುತ್ತಿದ್ದು ಅವುಗಳನ್ನು ಬಳಸಲು ಪುಣ್ಯಸ್ನಾನಕ್ಕೆ ಬರುವ ಭಕ್ತರಿಗೆ ಮನವರಿಕೆ ಮಾಡಿಕೊಡಲು ಹಲವು ಸಂಸ್ಥೆಗಳು ಕೂಡ್ಲಿ ಗ್ರಾಪಂದೊಂದಿಗೆ ಕೈ ಜೋಡಿಸುತ್ತಿವೆ. ಪರ್ಯಾವರಣ ಟ್ರಸ್ಟ್, ಸರ್ಜಿ ಫೌಂಡೇಶನ್, ಐಲೈಫ್ ಶಿವಮೊಗ್ಗ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್, ಸನ್ ರೈಸ್ ಸೆಕ್ಯೂರಿಟೀಸ್ ಸೇರಿದಂತೆ ಹಲವಾರು ಸಂಸ್ಥೆಗಳು ಮತ್ತು ಗ್ರಾ.ಪಂ. ವ್ಯಾಪ್ತಿಯ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಯವರು ಗ್ರಾ.ಪಂ. ಸಿಬ್ಬಂದಿ ವರ್ಗ ಹಾಗೂ ಕೂಡ್ಲಿಯ ಜನರು ಈ ಅಭಿಯಾನದ ಬೆನ್ನಿಗಿದ್ದಾರೆ ಎಂದು ಸಂಚಾಲಕ ಬಾಲಕೃಷ್ಣ ನಾಯ್ಡು ತಿಳಿಸಿದರು.
ಸಭೆಯಲ್ಲಿ ಕೂಡ್ಲಿ ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ ಉಪಾಧ್ಯಕ್ಷೆ ಅನ್ನಪೂರ್ಣ, ಕಾರ್ಯದರ್ಶಿ ಲಕ್ಷ್ಮಣಪ್ಪ, ಸದಸ್ಯೆ ಮಂಜುಳಾ, ಮಾಜಿ ಸದಸ್ಯ ವಾಗೀಶ್, ಪಿಡಿಒ ಶ್ರೀನಿವಾಸ್, ಪ್ರಮುಖರಾದ ಅಶೋಕ್ ಕುಮಾರ್, ಲೋಕೇಶಪ್ಪ, ಕಿರಣ್ ಕುಮಾರ್, ಸಿದ್ದೇಶ್, ಅನಿಲ್ ಕುಮಾರ್ ಹಾಗೂ ಗ್ರಾಮಸ್ಥರಿದ್ದರು.
