
ಶಿವಮೊಗ್ಗ :- ಎಲ್ಲ ವಿದ್ಯಾರ್ಥಿಗಳಲ್ಲಿ ತಮ್ಮದೇ ಆದ ಗುರಿ, ಕನಸು ಮತ್ತು ಪ್ರತಿಭೆಗಳು ಇರುತ್ತವೆ. ಸಮರ್ಪಕವಾದ ಯೋಜನೆ ರೂಪಿಸಿಕೊಂಡು ಅವುಗಳನ್ನು ಸಾಧಿಸಬೇಕೆಂದು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜನಗಳ ವಿಶ್ವವಿದ್ಯಾಲಯ ವತಿಯಿಂದ ನವುಲೆಯ ಕೃಷಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ೧೦ನೇ ಅಂತರ ಮಹಾವಿದ್ಯಾಲಯಗಳ ಯುವ ಜನೋತ್ಸವ ಯುವ ಸವಿಷ್ಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರ ಕಾಲೇಜಿನ ಯುವ ಜನೋತ್ಸವ ಒಂದು ವಿಶೇಷವಾದ ಮತ್ತು ಅಪರೂಪದ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿನ ವಿವಿಧ ರೀತಿಯ ಪ್ರತಿಭೆ ಅನಾವರಣಗೊಳಿಸಲು ಇದು ಸೂಕ್ತ ವೇದಿಕೆ. ವಿದ್ಯಾರ್ಥಿಗಳಿಗೆ ಈಗ ಗುರು ಇದ್ದಾರೆ. ತಮ್ಮದೇ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವೆಡೆ ಗಮನ ಹರಿಸಬೇಕು ಎಂದರು.
ಚಲನಚಿತ್ರ ನಟ ಭದ್ರಾವತಿಯ ದಿಲೀಪ್ ಪ್ರಕಾಶ್ ನಗಾರಿ ಬಾರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಓದು ಮುಖ್ಯ. ಆದರೆ ಪ್ರತಿಭೆ ಅನಾವರಣ ಸಹ ಬಹಳ ಮುಖ್ಯ. ನಮ್ಮನ್ನು ನಾವು ಸಮಾಜದಲ್ಲಿ ಒಂದಿಲ್ಲೊಂದು ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಹಗಲು ರಾತ್ರಿ ಶ್ರಮಿಸಬೇಕು. ನಮ್ಮ ಕನಸು, ಗುರಿ ತಲುಪುವವರೆಗೆ ನಿಲ್ಲಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿಕ್ಷಣ ತಜ್ಞರು ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಪಿ.ಕೆ. ಬಸವರಾಜ ಯುವ ಸವಿಷ್ಕಾರದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕೃಷಿ ಉದ್ದಿಮೆದಾರ ಮತ್ತು ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಬಿ.ಕೆ.ಕುಮಾರಸ್ವಾಮಿ, ಕುಲಪತಿ ಡಾ.ಆರ್.ಸಿ. ಜಗದೀಶ್ ಮಾತನಾಡಿದರು. ಮಾಜಿ ಕುಲಪತಿ ಡಾ.ವಾಸುದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಡೀನ್ ಡಾ.ಎನ್.ಎಸ್. ಮಾವರ್ಕರ್, ಕೃಷಿ ಡೀನ್ ಡಿ. ತಿಪ್ಪೇಶ್, ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ, ಡಾ. ಧನಂಜಯ ನಾಯಕ್, ಡಾ. ಶಶಿಧರ್, ಡಾ. ದುಷ್ಯಂತ ಕುಮಾರ್, ಡಾ. ಬಿ.ಕೆ.ಶಿವಣ ಹಾಗೂ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.