google.com, pub-9939191130407836, DIRECT, f08c47fec0942fa0

ಶಿವಮೊಗ್ಗ:- ನಗರದ ಪ್ರತಿಷ್ಠಿತ ಶ್ರೀಗಂಧ ಸಂಸ್ಥೆಯಿಂದ ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಶ್ರೀ ರಾಮನ ಆದರ್ಶ ಮೂರು ದಿನಗಳ ಉಪನ್ಯಾಸದಲ್ಲಿ ಉತ್ತರಾಧಿ ಮಠದ ಪೂಜ್ಯಶ್ರೀ 1008 ಶ್ರೀ ಸತ್ಯಾತ್ಮ ತೀರ್ಥರು ನೀಡಿದ ಅನುಗ್ರಹ ಸಂದೇಶದ ಸಾರಾಂಶ.

ಸಕಲ ಸದ್ಗುಣಗಳಲ್ಲಿ ಪರಿಪೂರ್ಣನಾದ ಶ್ರೀ ರಾಮಚಂದ್ರ ದೇವರ ಸೌಂದರ್ಯವನ್ನು ಮತ್ತು ಅವರ ಗುಣಗಳನ್ನು ವಿವರಿಸುವಾಗ ಶ್ರೀ ವಾಲ್ಮೀಕಿ ಮಹರ್ಷಿಯು ಬಳಸಿರುವ ಪದಗಳಲ್ಲಿ ಶ್ರೀ ರಾಮಚಂದ್ರರ 32 ಗುಣಗಳನ್ನು ವಿವರಿಸಿದ್ದಾರೆ. ಶ್ರೀಮದಾನಂದ ತೀರ್ಥರು ತಮ್ಮ ತಾತ್ಪರ್ಯ ನಿರ್ಣಯ ಗ್ರಂಥದಲ್ಲಿ ಶ್ರೀ ರಾಮಚಂದ್ರ ದೇವರ ಗುಣ- ವಿಶೇಷಣಗಳನ್ನು ವಿವರಿಸಿದ್ದಾರೆ.

ಶ್ರೀ ರಾಮಚಂದ್ರ ದೇವರ ಲೋಕಉದ್ದಾರಕ ವ್ಯಕ್ತಿತ್ವವು, ಜೀವನದ ದ್ವಂದ್ವಕಾಲದಲ್ಲಿ ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ರಾಮಚಂದ್ರ ದೇವರ ಗುಣಗಾನ ಮಾಡುವುದರಿಂದ ಜೀವನದ ಸಂಕಟಗಳಿಗೆ ಪರಿಹಾರ ದೊರೆಯುತ್ತದೆ ಎಂದರು.

ಪ್ರಭು ಶ್ರೀ ರಾಮರ ದರ್ಶನ ಮಾತ್ರದಿಂದ, ಅವರ ಗುಣಗಾನದಿಂದ ಮನದಲ್ಲಿ ಇರುವ ಸಹಸ್ರಾರು ದೋಷಗಳು ನಾಶವಾಗುತ್ತವೆ. ಮರ್ಯಾದ ಪುರುಷೋತ್ತಮರಾದ ಶ್ರೀ ರಾಮರ ಆದರ್ಶಗಳನ್ನು ಪಾಲಿಸಿ ಜೀವನ ಸಾಗಿಸಿದರೆ, ಯಾವುದೇ ತೊಂದರೆಗಳು ಕ್ಷಣಮಾತ್ರದಲ್ಲಿ ನಿವಾರಣೆಯಾಗುತ್ತವೆ. ಮನೆಯಲ್ಲಿ ರಾಮರ ಚಿತ್ರಪಟವನ್ನು ಇರಿಸಿದರೆ, ಅದರ ಅನುಸಂಧಾನದಿಂದ ನಮ್ಮ ಕುಹಕ ಬುದ್ಧಿ ನಾಶವಾಗಿ, ಪಿತೃವಾಕ್ಯ ಪರಿಪಾಲಕರಾದ ರಾಮರ ಆದರ್ಶ ಗುಣಗಳು ನಮ್ಮ ಮನದಲ್ಲಿ ಸಂಸ್ಕಾರ ಮೂಡಿಸುತ್ತವೆ ಎಂದ ಪೂಜ್ಯರು, ಶ್ರೀಮಧ್ವಾಚಾರ್ಯರು ಪ್ರಭು ರಾಮರ ಗುಣಗಳನ್ನು ವರ್ಣಿಸುವಾಗ ವೀರ್ಯವಾನ್ ಎಂಬ ಶಬ್ದವನ್ನು ಬಳಸಿದ್ದಾರೆ. ಪರಾಕ್ರಮಶಾಲಿಗಳು ತಮ್ಮ ಶಕ್ತಿ ಸಾಮರ್ಥ್ಯವನ್ನು ಸ್ವಾರ್ಥಕ್ಕಾಗಿ ಬಳಸದೆ, ಪರರ ಹಿತಕ್ಕಾಗಿ ಬಳಸಬೇಕು. ಜನಹಿತ, ಸಮಾಜ ಹಿತ ಮತ್ತು ಲೋಕಹಿತಕ್ಕಾಗಿ ಬಳಸುವ ಪರಾಕ್ರಮವು ಶ್ರೇಷ್ಠ ರಾಜನ ಲಕ್ಷಣವಾಗಿರುತ್ತದೆ. ಶ್ರೀಗಂಧವು ತನ್ನನ್ನು ಸಮರ್ಪಿಸಿ ಸುಗಂಧವನ್ನು ಹರಡುವಂತೆ, ರಾಜನಾಗಿರುವವನು ತನ್ನ ಸ್ವಾರ್ಥವನ್ನು ತ್ಯಜಿಸಿ ಲೋಕಾಯುಕ್ತ ಕ್ಕಾಗಿ ಬದುಕಬೇಕೆಂಬುದನ್ನು ಪ್ರಭು ರಾಮರು ತಮ್ಮ ನಡವಳಿಕೆಯಿಂದ ಲೋಕಕ್ಕೆ ತಿಳಿಸಿದರು ಎಂದರು.

ಸೌಂದರ್ಯವಂತರು, ಪರಾಕ್ರಮಶಾಲಿ ಶ್ರೀ ರಾಮರ ಮತ್ತೊಂದು ವಿಶೇಷ ಗುಣವೆಂದರೆ ಸಂಕಲ್ಪಶಕ್ತಿ. ಯಾವ ಪರಿಸ್ಥಿತಿಯಲ್ಲಿ ಯಾದರೂ ಕೊಟ್ಟ ಮಾತನ್ನು ಮೀರದೆ, ಕೊಟ್ಟ ಮಾತಿಗೆ ಬದ್ಧರಾಗಿ, ಕೊಂಚವೂ ವಿಷಾದಿಸದೆ, ಮಂದಸ್ಮಿತದಿಂದ ವನವಾಸವನ್ನು ಸ್ವೀಕರಿಸಿದರು. ವನವಾಸದ ಸಮಯದಲ್ಲಿ ಸುತ್ತಮುತ್ತಲಿನ ದುಷ್ಟರನ್ನು ಸಂಹರಿಸಿ, ಪ್ರಜೆಗಳನ್ನು ರಕ್ಷಿಸಿ, ಧರ್ಮ ಸ್ಥಾಪನೆ ಮಾಡುವ ವಿಧವನ್ನು ಜಗತ್ತಿಗೆ ತೋರಿಸಿ, ಪ್ರಭು ರಾಮರ ಆದರ್ಶವು ಸರ್ವಕಾಲಕ್ಕೂ ಸರ್ವರಿಗೂ ಮಾದರಿಯಾಗಿದೆ ಎಂದರು.

ಸಂಯಮವೆಂಬ ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡರೆ, ನಮ್ಮ ಅನೇಕ ಕಷ್ಟಗಳು ದೂರವಾಗುತ್ತವೆ. ನಮ್ಮ ನಂಬಿಕೆ, ಧೈರ್ಯ ಮತ್ತು ಧರ್ಮಾಚರಣೆ ಗಳಿಂದ ನಮ್ಮ ಪುಣ್ಯ ಫಲಗಳು ನಮ್ಮನ್ನು ರಕ್ಷಿಸುತ್ತವೆ ಎಂದ ಪೂಜ್ಯರು, ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ರಾಮರ ಆದರ್ಶ ಗುಣಗಳನ್ನು ಅನುಸರಿಸಬೇಕು. ಗುರು-ಹಿರಿಯರ ಮಾರ್ಗದರ್ಶನದಲ್ಲಿ, ಸಂದರ್ಭದಲ್ಲಿ ತಕ್ಕಂತೆ ವಿವೇಕಪೂರ್ಣವಾಗಿ ಮನುಷ್ಯ ತನ್ನ ಪ್ರಯತ್ನವನ್ನು ಮಾಡಬೇಕು. ಈ ರೀತಿಯಾಗಿ ಮಾಡಿದ ಕಾರ್ಯಗಳು ಯಶಸ್ವಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದರು.

ಕಾರ್ಯಕ್ರಮದಲ್ಲಿ ಶ್ರೀಗಂಧ ಸಂಸ್ಥೆ ಅಧ್ಯಕ್ಷರೂ ಮಾಜಿ ಉಪಮುಖ್ಯಮಂತ್ರಿಗಳೂ ಆದ ಕೆ.ಎಸ್. ಈಶ್ವರಪ್ಪ, ಯುವ ಹಿಂದೂ ಹುಲಿ ಕೆ.ಈ. ಕಾಂತೇಶ್, ಶ್ರೀಮತಿ ಜಯಲಕ್ಷ್ಮಿ ಈಶ್ವರಪ್ಪ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಉಪನ್ಯಾಸ ಕೇಳಲು ಬಂದಿದ್ದ ಆಸಕ್ತರಿಂದ ಇಡೀ ಶುಭಮಂಗಳ ಸಮುದಾಯ ಭವನವೇ ತುಂಬಿ ತುಳುಕುತ್ತಿದ್ದುದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *