
ಶಿವಮೊಗ್ಗ :- ದೇಶಿಯ ವಿದ್ಯಾ ಶಾಲಾ ಸಮಿತಿ ಹಾಗೂ ಡಿವಿಎಸ್ ಕಲಾ, ವಿಜನ ಮತ್ತು ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಡಿ. 4ರಿಂದ ಡಿ. 6ರವರೆಗೆ ಮೂರು ದಿನಗಳ ಕಾಲ 37ನೇ ಕುವೆಂಪು ವಿಶ್ವವಿದ್ಯಾಲಯ ಅಂತರಕಾಲೇಜು ಅಥ್ಲೇಟಿಕ್ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರೀಡಾಕೂಟವು ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ನಡೆಯುತ್ತಿದ್ದು, ಕ್ರೀಡಾಕೂಟವು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಕುವೆಂಪು ವಿವಿ ವ್ಯಾಪ್ತಿಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಒಟ್ಟು 15 ಕಾಲೇಜುಗಳ ಸುಮಾರು 712 ಕ್ರೀಡಾಕೂಟಗಳು ಭಾಗವಹಿಸುತ್ತಿದ್ದಾರೆ ಎಂದರು.
ಕ್ರೀಡಾಕೂಟದಲ್ಲಿ 455 ವಿದ್ಯಾರ್ಥಿಗಳು, 257 ವಿದ್ಯಾರ್ಥಿನಿಯರು ಭಾಗವಹಿಸುತ್ತಿದ್ದು, 160 ಅಧಿಕಾರಿ ವರ್ಗ ಮತ್ತು ತಾಂತ್ರಿಕ ವರ್ಗ, 75 ಸ್ವಯಂ ಸೇವಕರು ಭಾಗವಹಿಸುತ್ತಿದ್ದಾರೆ ಎಂದರು.
ಭಾಗವಹಿಸುವ ಕ್ರೀಡಾಪಟುಗಳಿಗೆ ಕಾಲೇಜು ಹಾಗೂ ನೆಹರೂ ಕ್ರೀಡಾಂಗಣದಲ್ಲಿ, ಮಹಿಳಾ ಕ್ರೀಡಾಪಟುಗಳಿಗೆ ವಸತಿ ನಿಲಯದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಕೂಟದ ಯಶಸ್ಸಿಗಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಡಿ. 4ರ ಬೆಳಿಗ್ಗೆ 10ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಡಿ. 6ರಂದು ನಡೆಯುವ ಸಮಾರೋಪ ಸಮಾರಂಭವನ್ನು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಕೆ.ಎ.ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಈ ಎರಡು ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎಸ್.ರುದ್ರಪ್ಪ ಕೊಳಲೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಮಿತಿ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿರುವರು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ವೆಂಕಟೇಶ್ ಮಾತನಾಡಿ, ಡಿ. 6ರಂದು ಬೆಳಿಗ್ಗೆ 7ಕ್ಕೆ ಮಹಿಳಾ-ಪುರುಷರ ಮಾರಥಾನ್ ಓಟವು ಎಂಆರ್ಎಸ್ ವೃತ್ತದಿಂದ ಆರಂಭವಾಗಿ ಲಕ್ಕಿನಕೊಪ್ಪ ವೃತ್ತ ಎಡಭಾಗಕ್ಕೆ ತಿರುಗಿ ಒಂದು ಕಿ.ಮಿ. ವ್ಯಾಪ್ತಿಯವರೆಗೆ ಸಾಗಿ ಮತ್ತೆ ಎಂಆರ್ಎಸ್ ವೃತ್ತದಲ್ಲಿ ಮುಕ್ತಾಯವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಹಕಾರ್ಯದರ್ಶಿ ಡಾ.ಎ.ಎಸ್.ಸತೀಶ್ಕುಮಾರ್ ಶೆಟ್ಟಿ, ಪ್ರೊ.ಎನ್.ಕುಮಾರಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಸಚಿನ್ ಕೆ. ಉಪಸ್ಥಿತರಿದ್ದರು.