ಶಿವಮೊಗ್ಗ: ಶರಾವತಿ ಹಾಗೂ ಪಶ್ಚಿಮಘಟ್ಟಗಳ ಉಳಿಸಲು ಆಗ್ರಹಿಸಿ ಇಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ಸಮಿತಿಯ ಹಲವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿದರು.
ಶರಾವತಿ ಕೊಳ್ಳದಲ್ಲಿ ಪಂಪ್ಸ್ಟೋರೇಜ್ ಯೋಜನೆ ಅವೈಜ್ಞಾನಿಕವಾಗಿ ಜಾರಿಯಾಗುತ್ತಿದೆ ಎಂದು ಈಗಾಗಲೇ ಪರಿಸರವಾದಿಗಳು, ವಿಜ್ಞಾನಿಗಳು ಹಲವು ಸಂಘ ಸಂಸ್ಥೆಗಳು, ಸಂಘಟನೆಗಳು, ವಿದ್ಯಾರ್ಥಿಗಳು, ಹೋರಾಟವನ್ನು ನಡೆಸುತ್ತಲೇ ಬಂದಿದ್ದಾರೆ. ಅಲ್ಲದೆ, ಪಶ್ಚಿಮ ಘಟ್ಟದಲ್ಲಿ ಹಲವು ಮಾರಕವಾದ ಯೋಜನೆಗಳು ಜಾರಿಯಾಗಿವೆ. ಇಡೀ ಶರಾವತಿಯ ಕೆಳಭಾಗ ನಾಶವಾಗುತ್ತಿದೆ. ಈ ಎಲ್ಲಾ ಯೋಜನೆಗಳು ಪರಿಸರ ವಿರೋಧಿಯಾಗಲಿವೆ. ಆದ್ದರಿಂದ ಶರಾವತಿ ಮತ್ತು ಪಶ್ಚಿಮ ಘಟ್ಟದಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಯಾವ ಯೋಜನೆಗಳು ಬೇಡ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಶೇಖರ್ ಗೌಳಿ, ಕೆ.ಇ.ಕಾಂತೇಶ್, ರಮೇಶ್ ಬಾಬು, ಉಮೇಶ್ ಆರಾಧ್ಯ, ನಾಗೇಶ್, ಕುಬೇರಪ್ಪ, ಸತ್ಯಣ್ಣ, ಶ್ರೀಪತಿ, ನಾಗರಾಜ್, ಜನಾರ್ಧನ ಪೈ, ಸುಬ್ರಮಣ್ಯ, ಎಂ.ಶಂಕರ್ ಸೇರಿದಂತೆ ಹಲವರಿದ್ದರು.