
ಶಿವಮೊಗ್ಗ :- ಮಾಧ್ಯಮದವರು ಪೊಲೀಸ್ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಸೇತುವೆ ಇದ್ದ ಹಾಗೆ. ನಮ್ಮ ಇಲಾಖೆಯ ಎಲ್ಲಾ ಒಳ್ಳೆಯ ಕೆಲಸ ಹಾಗೂ ನ್ಯೂನತೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಎಲ್ಲಾ ಜನತೆ ವಿಶ್ವಾಸದಿಂದ ಒಟ್ಟಿಗೆ ಸೇರಿ ಕೆಲಸ ಮಾಡೋಣ. ಈ ಜಿಲ್ಲೆಗೆ ಬಂದಿರು ವುದು ನನ್ನ ಭಾಗ್ಯ ಎಂದು ಶಿವಮೊಗ್ಗ ಜಿಲ್ಲಾ ನೂತನ ರಕ್ಷಣಾಧಿಕಾರಿ ಬಿ ನಿಖಿಲ್ ಅವರು ಇಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯವನಾಗಿದ್ದು, ಇಂಜಿನಿಯರಿಂಗ್ ಮುಗಿಸಿ ೨೦೧೭ರಲ್ಲಿ ಐಪಿಎಸ್ ಅಧಿಕಾರಿ ಯಾಗಿ ಬೆಂಗಳೂರು ಎಎನ್‌ಎಫ್ ಹಾಗೂ ಗಡಿಭಾಗದ ಜಿಲ್ಲೆಗಳಾದ ರಾಯಚೂರು ಮತ್ತು ಕೋಲಾರದಲ್ಲಿ ಕೆಲಸ ನಿರ್ವಹಿಸಿ ಈಗ ಮಧ್ಯ ಕರ್ನಾಟಕಕ್ಕೆ ಬಂದಿದ್ದೇನೆ. ಇದೀಗ ಶಿವಮೊಗ್ಗ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಲು ಬಂದಿರುವುದು ನನ್ನ ಭಾಗ್ಯ ಶಿವಮೊಗ್ಗ ಜಿಲ್ಲೆಯನ್ನು ನಶ ಮುಕ್ತವಾಗಿಸುವುದು ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು.
ಪ್ರತಿಯೊಂದು ತಾಲ್ಲೂಕಿಗೂ ಅದರದೇ ಆದ ವೈವಿಧ್ಯತೆ ಇದೆ. ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ನಾಳೆಯಿಂದ ಪ್ರತಿ ಠಾಣೆಗೂ ಭೇಟಿ ನೀಡುತ್ತೇನೆ. ಇಲಾಖೆಯ ಜೊತೆ ನಿರಂತರ ಸಂಪರ್ಕಕ್ಕಾಗಿ ‘ಪಬ್ಲಿಕ್ ಐ’ ಎಂಬ ಹೊಸ ವಾಟ್ಸ್‌ಅಪ್ ಗ್ರೂಪ್ ಪ್ರಾರಂಭವಾಗಲಿದ್ದು, ಸಾರ್ವಜನಿಕರು ತಮ್ಮ ಕುಂದು- ಕೊರತೆಗಳನ್ನು ಹಂಚಿಕೊಳ್ಳ ಬಹುದು. ನನಗೆ ವೈಯಕ್ತಿಕವಾಗಿ ದೂರವಾಣಿ ಕರೆ ಮಾಡಬಹುದು. ಒಂದು ವೇಳೆ ಕರೆ ಸ್ವೀಕರಿಸದಿದ್ದಾಗ ನನ್ನ ನಂಬರಿಗೆ ಮೇಸೇಜನ್ನು ಕೂಡ ಹಾಕಬಹುದು. ನಶೆಮುಕ್ತ ಶಿವಮೊಗ್ಗ ಮಾಡಲು ಡ್ರಗ್ಸ್ ವಿರುದ್ಧ ಸಮರವನ್ನೇ ಸಾರಲಿದ್ದೇವೆ ಎಂದು ಅವರು ಹೇಳಿದರು.
ಮುಂದಿನ ಯುವಪೀಳಿಗೆಗೆ ಡ್ರಗ್ಸ್ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅದರ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ಅದಕ್ಕಾಗಿಯೇ ‘ಸನ್ಮಿತ್ರ’ ಎಂಬ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುವುದು. ಸೈಬರ್ ಕ್ರೈಂ ನಿಯಂತ್ರಣಕ್ಕೆ ಮತ್ತು ಜಾಗೃತಿ ಮೂಡಿಸಲು ಸೂಕ್ತಕ್ರಮ ಕೈಗೊಳ್ಳಲಾಗುವುದು. ೧೫ ದಿನಕ್ಕೊಮ್ಮೆ ‘ಆರಕ್ಷಕ ದಿನ’ ಆಚರಿಸಿ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕುಂದು-ಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದೆಂದರು.
ಪೊಲೀಸರ ದಂಡಕ್ಕೆ ಹೆದರಿ ಹೆಲ್ಮೆಟ್ ಹಾಕಬೇಡಿ. ನಿಮ್ಮ ಮನೆಯಲ್ಲಿ ನಿಮ್ಮನ್ನು ಪ್ರೀತಿಸುವ ಜೀವಕ್ಕಾಗಿ ನೀವು ಹೆಲ್ಮೆಟ್ ಹಾಕಿಕೊಳ್ಳಿ ಎಂದು ಜಾಗೃತಿ ಮೂಡಿಸಲಾಗುವುದು. ರಾಜಕೀಯ ಒತ್ತಡ ಏನೇ ಇರಲಿ, ಕಾನೂನಾತ್ಮಕವಾಗಿಯೇ ಕೆಲಸ ಮಾಡಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ರಮೇಶ್ ಕಾರ್ಯಪ್ಪ ಹಾಗೂ ಪ್ರೊಬೆಷನರಿ ಎಸ್‌ಪಿ ಮೇಘಾ ಅಗರ್‌ವಾಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿದ್ದರು.
