ಶಿವಮೊಗ್ಗ :- ರಮಣ ಮಹರ್ಷಿಗಳ ಜೀವನ ಸಂದೇಶ ನಮಗೆಲ್ಲ ಪ್ರೇರಣೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಹೇಳಿದರು.
ಬಸವ ಕೇಂದ್ರದಲ್ಲಿ ಶ್ರೀ ರಮಣ ಕೇಂದ್ರದ ವತಿಯಿಂದ ರಮಣ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಡಿ.ಜಿ.ಶಿವಣ್ಣಗೌಡ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿ, ಭಗವಾನ್ ಶ್ರೀ ರಮಣರು ಮೌನವಾಗಿದ್ದುಕೊಂಡೇ ಸಮಾಜವನ್ನು ತಿದ್ದಿದರು. ಅಂತಹವರ ಬಗ್ಗೆ ಶಿವಮೊಗ್ಗದಲ್ಲಿ ಒಂದು ಉತ್ತಮ ಕಟ್ಟಡ ನಿರ್ಮಾಣ ಮಾಡಲು ಮುಂದಿನ ದಿನಗಳಲ್ಲಿ ಪ್ರಯತ್ನಿಸೋಣ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಇಂದಿನ ಜೀವನದ ತೊಳಲಾಟದಲ್ಲಿ ರಮಣರ ತತ್ವಗಳು ಮನಶಾಂತಿ ನೀಡುತ್ತದೆ ಎಂಬುದನ್ನು ಅರಿಯಬೇಕು. ಇಂದಿನ ಕಾರ್ಯಕ್ರಮ ಅರ್ಥಪೂರ್ಣ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಮಾತನಾಡಿ, ಶಾಲಾ ಪಠ್ಯದಲ್ಲಿ ರಮಣರ ಬಗ್ಗೆ ತಿಳಿಸುವ ಪಠ್ಯ ಸೇರಿಸಬೇಕು. ಶಿವಮೊಗ್ಗದಲ್ಲಿ ಒಂದು ಶಾಶ್ವತವಾದ ರಮಣ ಕೇಂದ್ರ ಸ್ಥಾಪಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಶಾಂತಿಯನ್ನು ಅರಸಿಕೊಂಡು ಹೋಗಬೇಕಿಲ್ಲ. ಅದು ನಮ್ಮಲ್ಲಿಯೇ ಇದೆ ಎಂಬ ರಮಣರ ಮಾತು ನಮಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.
ವಿದ್ವಾನ್ ರಾಘವೇಂದ್ರ ಭಟ್ ಮಾತನಾಡಿ, ರಮಣ ಮಹರ್ಷಿಗಳು ನಿದ್ರೆಯಲ್ಲಿಯೂ ಸದಾ ಜಾಗೃತವಾಗಿದ್ದ ಮಹಾಸಾಧಕರಾಗಿದ್ದರು. ಅರುಣಾಚಲ ಎಂಬ ಹೆಸರನ್ನು ಕೇಳಿ ಪುಳಕಿತರಾದ ಬಾಲಕ ರಮಣ ಇಡೀ ತನ್ನ ಜೀವನವನ್ನು ತಿರುವಣ್ಣಾಮಲೈನಲ್ಲಿ ಕಳೆದ ರೀತಿ ಇತರರಿಗೆ ಮಾದರಿಯಾಗಿದ್ದಾರೆ. 71 ವರ್ಷ ಜೀವಿಸಿದ್ದ ಮಹಾ ಸಾಧಕರು ಇರುವಷ್ಟು ದಿನವೂ ಸಕಲ ಪ್ರಾಣಿ ಪಕ್ಷಿಗಳನ್ನು, ಎಲ್ಲ ಜೀವಿಗಳನ್ನೂ ಒಂದೇ ರೀತಿಯಲ್ಲಿ ಕಾಣುವ ಮನಸ್ಸನ್ನು ಹೊಂದಿದ್ದರು ಎಂದರು.
ಲಲಿತಮ್ಮ ಮತ್ತು ಸಂಗಡಿಗರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು. ರತ್ನಮ್ಮ ಪ್ರಾರ್ಥಿಸಿದರು. ರಮಣ ಕೇಂದ್ರದ ವಿನಾಯಕ ಸ್ವಾಗತಿಸಿದರು. ಎಂ.ಎನ್.ಸುಂದರ್ ರಾಜ್ ಪ್ರಾಸ್ತಾವಿಕ ಮಾತನಾಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ವಂದಿಸಿದರು. ಶಾಂತಮ್ಮ, ವಿನಯ್, ಚನ್ನಪ್ಪ, ಡಿ.ಎಸ್.ಚಂದ್ರಶೇಖರ್, ಶೀಲಾ ಚಂದ್ರಶೇಖರ್, ಎ.ಎಲ್.ಚಂದ್ರಶೇಖರ ಉಪಸ್ಥಿತರಿದ್ದರು.
