google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಂದಿನ ಸಾಲಿಗೆ 45 ಕೋಟಿ ರೂ. ಲಾಭಗಳಿಸುವ ಉದ್ದೇಶ ಹೊಂದಿದ್ದು, ಬ್ಯಾಂಕನ್ನು ಮತ್ತಷ್ಟು ಆಧುನಿಕಗೊಳಿಸಲಾಗುವುದು ಎಂದು ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.

ಅವರು ಇಂದು ಬ್ಯಾಂಕಿನ ಸಭಾಂಗಣದಲ್ಲಿ ಹೊಸವರ್ಷ-2026ರ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಡಿಸಿಸಿ ಬ್ಯಾಂಕನ್ನು ಮತ್ತಷ್ಟು ಸದೃಢ ಮತ್ತು ಆಧುನಿಕಗೊಳಿಸಲಾಗುವುದು. ಈ ಹಿನ್ನಲೆಯಲ್ಲಿ ಸುಮಾರು 50 ಹೊಸ ಶಾಖೆಗಳನ್ನು ತೆರೆಯಲಾಗುತ್ತದೆ. ಜಿಲ್ಲೆಯ ಎಲ್ಲಾ ಹಿಂದುಳಿದ ಭಾಗಗಳಲ್ಲೂ ಶಾಖೆಗಳನ್ನು ತೆರೆಯುವ ಮೂಲಕ ಗ್ರಾಹಕರನ್ನು ಡಿಸಿಸಿ ಬ್ಯಾಂಕ್ ತೆಕ್ಕೆಗೆ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ 8 ಶಾಖೆಗಳನ್ನು ತೆರೆಯಲಾಗಿದೆ. ಬ್ಯಾಂಕಿನ ವಜ್ರ ಮಹೋತ್ಸವದ ನೆನಪಿಗೆ ಮುಂದಿನ ಸಾಲಿನಲ್ಲಿ ಆಯನೂರು, ಕಾಚಿನಕಟ್ಟೆ, ತುಮುರಿ ಬ್ಯಾಕೋಡು, ಕುಪ್ಪಗಡ್ಡೆ, ಚಂದ್ರಗುತ್ತಿ, ಹಿತ್ಲ, ನಿಟ್ಟೂರು ಸೇರಿದಂತೆ 14 ಶಾಖೆಗಳನ್ನು ತೆರೆಯಲಾಗುವುದು. 2028ರ ವೇಳೆಗೆ 50 ಶಾಖೆಗಳನ್ನು ಪೂರ್ಣಗೊಳಿಸಲಾಗುವುದು ಮತ್ತು ವಜ್ರ ಮಹೋತ್ಸವದ ಹಿನ್ನಲೆಯಲ್ಲಿ ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡವನ್ನು ಸ್ಥಾಪಿಸಲು ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಸಂಕ್ರಾಂತಿ ನಂತರ ಭೂಮಿಪೂಜೆ ಮಾಡಲಾಗುವುದು ಎಂದರು.

ಬ್ಯಾಂಕ್ 2025ನೇ ಸಾಲಿನಲ್ಲಿ 36.57 ಕೋಟಿ ಲಾಭಗಳಿಸಿತ್ತು. 2026ನೇ ಸಾಲಿನಲ್ಲಿ ಸುಮಾರು 45 ಕೋಟಿ ಲಾಭ ಹೊಂದುವ ನಿರೀಕ್ಷೆಯಿದೆ. ಹಾಗೆಯೇ 1.26 ಲಕ್ಷ ರೈತರಿಗೆ 1300 ಕೋಟಿ ರೂ. ಬೆಳೆ ಸಾಲ ನೀಡಲಾಗುವುದು. ಸುಮಾರು 2100 ಸ್ವ-ಸಹಾಯ ಸಂಘಗಳಿಗೆ 100 ಕೋಟಿ ರೂ. ಸಾಲ ವಿತರಿಸುವ ಯೋಜನೆ ಹೊಂದಲಾಗಿದೆ. 1900 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಬ್ಯಾಂಕ್‌ನಲ್ಲಿ 1720.88 ಕೋಟಿ ಠೇವಣಿ ಸಂಗ್ರಹವಾಗಿರುತ್ತದೆ ಎಂದು ತಿಳಿಸಿದರು.

ಬ್ಯಾಂಕಿನ ಸೇವೆಯನ್ನು ಸರಳಗೊಳಿಸುವ ಮತ್ತು ಎಲ್ಲರನ್ನು ತಲುಪಿಸುವ ಉದ್ದೇಶದಿಂದ ಈಗಾಗಲೇ ಐಎಂಪಿಎಸ್, ಯುಪಿಐ ಮೂಲಕ ಫೋನ್ ಪೇ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ತೀರಾ ಹಿಂದುಳಿದ ಕ್ಷೇತ್ರಗಳಲ್ಲಿ ಎಟಿಎಂನ್ನು ಕೂಡ ತೆರೆಯಲಾಗುವುದು ಮತ್ತು ಮೊಬೈಲ್ ಬ್ಯಾಂಕನ್ನು ಕೂಡ ವಿಸ್ತರಿಸಲಾಗುವುದು ಎಂದರು. ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರುಗಳಾದ ಮಹಾಲಿಂಗಯ್ಯ ಶಾಸ್ತ್ರೀ, ದುಗ್ಗಪ್ಪಗೌಡ, ಎಂ. ಶ್ರೀಕಾಂತ್, ಜಿ.ಎನ್. ಸುಧೀರ, ಅಧಿಕಾರಿ ನಾಗಭೂಷಣ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *