ಶಿವಮೊಗ್ಗ :- ನಗರದ ಪ್ರತಿಷ್ಠಿತ ಸೆಕ್ರೇಡ್ ಹಾರ್ಟ್ ಪ್ರೌಢ ಶಾಲೆಯ 60ನೇ ವರ್ಷದ ವಜ್ರಮಹೋತ್ಸವದ ಆಚರಣೆಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು ಎಂದು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ 1965ರಲ್ಲಿ ಚಿಕ್ಕಿದಾಗಿ ಪ್ರಾರಂಭಗೊಂಡು ಇಂದು ಹೆಮ್ಮರವಾಗಿ ಬೆಳೆದಿದೆ. 1990ರಲ್ಲಿ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡಿತ್ತು. ಈಗ ವಜ್ರ ಮಹೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದೇವೆ. ಕಾರ್ಯಕ್ರಮದ ಭಾಗವಾಗಿ ಡಿ. 20 ಮತ್ತು ೨೧ರಂದು ವಜ್ರಮಹೋತ್ಸವ ಆಚರಣೆಯನ್ನು ಮಾಡಲಾಗುವುದು. ಡಿ. 20ರಂದು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಏರ್ಪಡಿಸಲಾಗಿದೆ ಮತ್ತು ಹಳೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಕ್ರೀಡೆಗಳ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಶಾಲಾ ಆವರಣದಲ್ಲಿ ಸಂಜೆ ಮನೋರಂಜನೆ ಹಾಗೂ ಔತಣಕೂಟ ಕಾರ್ಯಕ್ರಮವಿದೆ. ಡಿ. 21ರಂದು ಸಂಜೆ ಶಾಲಾ ಆವರಣದಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳೊಂದಿಗೆ ವಜ್ರಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ವೇದಿಕೆ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಸಧ್ಯದಲ್ಲಯೇ ಬಿಡುಗಡೆ ಮಾಡಲಾಗುವುದು ಎಂದರು.
ಸೆಕ್ರೇಡ್ ಹಾರ್ಟ್ನ ಧರ್ಮಗುರು ಫಾ.ಸ್ಟ್ಯಾನಿ ಡಿಸೋಜ ಮಾತನಾಡಿ, ಈ ಶಾಲೆಯು ಕಳೆದ ೫೯ ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದೆ. ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ರಾಜಕೀಯ, ಶೈಕ್ಷಣಿಕ, ವೈದ್ಯಕೀಯ, ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಜಿಲ್ಲಾಧಿಕಾರಿಗಳಾದ ಸುಹಾಸ್ ಎಲ್.ವೈ., ಡಾ. ದಯಾನಂದ, ರಾಜಕಾರಣಿಗಳಾದ ಡಾ. ಧನಂಜಯ ಸರ್ಜಿ, ಕುಮಾರ್ ಬಂಗಾರಪ್ಪ, ವಿಜನಿಗಳಾದ ಗಣೇಶ್ ನಾಯರ್, ಐಎಎಸ್ ಪದವಿ ಪಡೆದ ಮಂಜುನಾಥ್ ನಾಯಕ್ ಸೇರಿದಂತೆ ಹಲವರು ಈ ಶಾಲೆಯಲ್ಲಿಯೇ ಓದಿದ್ದಾರೆ. ನಾಡಿಗೆ ಹೆಸರು ತಂದಿದ್ದಾರೆ. ಅನೇಕ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದಿ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ ಎಂದರು.
ವಜ್ರ ಮಹೋತ್ಸವದ ಅಂಗವಾಗಿ ಶಾಲೆಗೆ ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ನೀಡಿ, ಉನ್ನತದರ್ಜೆಗೆ ಏರಿಸಲಾಗುವುದು. ಸ್ಮಾರ್ಟ್ಕ್ಲಾಸ್, ಮಧ್ಯಾಹ್ನದ ಬಿಸಿಯೂಟ ಯೋಜನೆ, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕಟ್ಟಡ ದುರಸ್ಥಿ ಸೇರಿದಂತೆ ಈಗಿರುವ ಸೌಲಭ್ಯಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಳೆಯ ವಿದ್ಯಾರ್ಥಿಗಳಾದ ಡಾ. ಧನಂಜಯ ಸರ್ಜಿ, ಹೆಚ್.ಸಿ. ಯೋಗೀಶ್, ಬಳ್ಳೇಕೆರೆ ಸಂತೋಷ್, ಹರ್ಷಾ, ರಾಕೇಶ್ ಡಿಸೋಜ, ಕಿರಣ್, ಮರಿಯಪ್ಪ, ವಿಲಿಯಂ ಡಿಸೋಜ, ವಿನ್ಸಿಂಟ್, ಫ್ಯಾಟ್ರಿಕ್, ಸೆಕ್ರೇಡ್ ಹಾರ್ಟಿನ ಫಾ. ಕ್ಲಿಫರ್ಡ್ರೋಷನ್ ಪಿಂಟೋ, ಫಾ. ಫ್ರಾನ್ಸಿಸ್ ನರೋನ, ಮುಖ್ಯ ಶಿಕ್ಷಕ ಹ್ಯೂಬರ್ಟ್ ಮಿರಾಂಡಾ ಸೇರಿದಂತೆ ಹಲವರಿದ್ದರು.