ಶಿಕಾರಿಪುರ :- ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕಳೆದ 2ರಿಂದ 3 ದಶಕದ ಹಿಂದೆ ವಿದ್ಯಾರ್ಥಿಗಳು ನೆಟ್ಟು ಇದೀಗ ಸಮೃದ್ದವಾಗಿ ಬೆಳೆದು ನಿಂತಿದ್ದ ಹಲವು ಮರಗಳನ್ನು ಆಡಳಿತ ಮಂಡಳಿ ಯವರು ಅತ್ಯಂತ ನಿರ್ಧಾಕ್ಷಿಣ್ಯವಾಗಿ ಜಂಗಲ್ ಕಟಿಂಗ್ ನೆಪದಲ್ಲಿ ಕಡಿದು ಹಾಕಿದ್ದು ಈ ಬಗ್ಗೆ ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಆ ಸಮಯ ದಲ್ಲಿ ಕಾಳಜಿ ಯಿಂದ ಟ್ರೀ ಗಾರ್ಡ್‌ಗಳನ್ನು ನೆಟ್ಟು ಅವುಗಳನ್ನು ಅಂದಿನಿಂದ ಪ್ರತಿದಿನ ಕಾಪಾಡಿ ನಿತ್ಯ ದೂರದ ಕಂಬಳಿ ಹೊಂಡ ದಿಂದ ನೀರು ತಂದು ಹಾಕಿ ಇದೀಗ ಅತ್ಯಂತ ಸಮೃದ್ದವಾಗಿ ಬೆಳೆದು ಸುತ್ತಮುತ್ತಲಿನ ವಾತಾವರಣವನ್ನು ತಂಪಾಗಿರಿಸಿದ್ದ ಹತ್ತಾರು ಮರಗಳನ್ನು ಕಾಲೇಜು ಆಡಳಿತ ಮಂಡಳಿ ವಿನಾಕಾರಣ ಇಲ್ಲದ ನೆಪ ಹೇಳಿ ನಿರ್ದಾ ಕ್ಷಿಣ್ಯವಾಗಿ ಕಡಿದುಹಾಕಿದ ಕೃತ್ಯಕ್ಕೆ ವಿದ್ಯಾರ್ಥಿ ಗಳ ಜೊತೆ ಪರಿಸರ ವಾದಿಗಳು, ಸಾರ್ವಜನಿಕರು ಖಂಡಿಸಿದ್ದಾರೆ.

ವಿದ್ಯುತ್ ತಂತಿಗೆ ಮರದ ರಂಬೆಗಳು ತಾಕುತ್ತಿವೆ ಎಂಬ ಕುಂಟು ನೆಪ ಹೇಳುತ್ತಿದ್ದಾರೆ. ಇಲ್ಲಿ ವಿವಿಧ ಜಾತಿಯ ಎಂಟಕ್ಕೂ ಅಧಿಕ ಮರಗಳ ಮಾರಣ ಹೋಮ ತಪ್ಪಿಸಲು ರೆಂಬೆ ಕೊಂಬೆಗಳನ್ನು ಮಾತ್ರ ಕಡಿಯ ಬಹುದಾಗಿತ್ತೇ ಹೊರತು ಸಂಪೂರ್ಣ ಮರ ನೆಲಸಮ ಗೊಳಿಸುವ ಅಧಿಕಾರ ಇರಲಿಲ್ಲ ಆದರೆ ಮರಗಳನ್ನು ಉಳಿಸುವ ಯಾವ ಪ್ರಯತ್ನ ಮಾಡದೆ ನಿರ್ಧಾಕ್ಷೀಣ್ಯವಾಗಿ ಮರಗಳ ಮಾರಣ ಹೋಮವಾಗಿದೆ.
ಸಸಿ ನೆಟ್ಟು ಪೋಷಿಸಿ ಎಂದು ತಿಳಿಹೇಳ ಬೇಕಾದ ಕಾಲೇಜು ಆಡಳಿತ ಮಂಡಳಿ ಬೆಲೆ ಕಟ್ಟಲಾಗದ ಹಲವು ಮರಗಳನ್ನು ಧರೆಗುರುಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಹಳೆ ವಿದ್ಯಾರ್ಥಿ ಮಂಜುನಾಥ್ ಕಳೆಗುಡ್ಡಿ, ೯೦ ರ ದಶಕದಲ್ಲಿ ಸಸಿ ನೆಟ್ಟು ದೂರದ ಕಂಬಳಿ ಹೊಂಡದಿಂದ ತಂದು ಪೋಷಿಸಿ ಇದೀಗ ನೆರಳು ನೀಡುತ್ತಿದ್ದ ಮರಗಳ ಮಾರಣಹೋಮ ಅತ್ಯಂತ ಹೇಯ ಕೃತ್ಯವಾಗಿದ್ದು, ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಧರೆಗುರುಳಿಸಿದ ಕೃತ್ಯ ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ. ಕಟ್ಟಡಕ್ಕೆ ಮರದ ಎಲೆ ಬಿದ್ದು ನೀರು ನಿಂತು ಹಾನಿ ಯಾಗುವ ನಿಟ್ಟಿನಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಕೇವಲ ರೆಂಬೆ ಕೊಂಬೆಗಳನ್ನು ಕತ್ತ ರಿಸಲು ಸೂಚಿಸಿದ್ದಾರೆಂದು ತಿಳಿದುಬಂದಿದೆ. ಆದರೆ ಸಂಪೂರ್ಣ ಮರ ಕಡಿಯಲು ಆದೇಶಿ ಸಲು ಯಾವುದೇ ಜವಾಬ್ದಾರಿ ಹೊಂದಿಲ್ಲ ಈ ಬಗ್ಗೆ ತನಿಖೆ ನಡೆಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಾಚಾರ್ಯ ಡಾ. ಬಿ.ಜಿ. ಚನ್ನಪ್ಪ ಅವರು, ಎತ್ತರಕ್ಕೆ ಬೆಳೆದ ಮರದ ರೆಂಬೆಯಲ್ಲಿನ ಎಲೆಗಳು ಉದುರಿ ಮಳೆಗಾಲದಲ್ಲಿ ಕಟ್ಟಡದ ಮೇಲ್ಬಾಗ ದಲ್ಲಿ ನಿಂತು ಮಳೆ ನೀರು ಸಂಗ್ರಹ ವಾಗಿ ಕಟ್ಟಡ ಹಾನಿಯಾಗುತ್ತಿದ್ದು ಹಾಗೂ ಒಣಗಿದ ಮರ ಬಿದ್ದು ವಿದ್ಯಾರ್ಥಿಗಳ ಜೀವಹಾನಿಯಾಗುವ ಅಪಾಯದಿಂದ ಶಾಸಕರು ಹಾಗೂ ಕಾಲೇಜು ಮೇಲುಸ್ತು ವಾರಿ ಸಮಿತಿ ಒಪ್ಪಿಗೆ ಮೇರೆಗೆ ನೆಲಸಮ ಗೊಳಿಸಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ.
ಸಹಾಯಕ ವಲಯ ಅರಣ್ಯಾಧಿಕಾರಿ ಪ್ರಮೋದ್ ಅವರು, ಮರ ಕತ್ತರಿಸಲು ಕಾಲೇಜು ಆಡಳಿತ ಮಂಡಳಿ ಇಲಾಖೆಯ ಒಪ್ಪಿಗೆ ಪಡೆದಿಲ್ಲ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳ ಪರಿಶೀಲಿಸಲಾಗಿದ್ದು ಇದಕ್ಕೆ ಸಂಬಂಧಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಶಾಸಕರ ಭೇಟಿ : ಕ್ರಮಕ್ಕೆ ಸೂಚನೆ

ಅನುಮತಿ ಇಲ್ಲದೇ ಕಾಲೇಜು ಆವರಣದಲ್ಲಿ ಮರಗಳನ್ನು ಕಡಿದಿರುವ ಹಿನ್ನೆಲೆ ಶಾಸಕ ವಿಜಯೇಂದ್ರ ಅವರು ಶಿಕಾರಿಪುರ ಪ್ರಥಮ ದರ್ಜೆ ಕಾಲೇಜು ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕರ ಮತ್ತು ಅರಣ್ಯಾಧಿಕಾರಿಗಳ ಅನುಮತಿಯಿಲ್ಲದೇ, ಸರ್ಕಾರಿ ಕಾಲೇಜಿಗೆ ಸಂಬಂಧಪಟ್ಟ ಕೆಲವರು ಮರಗಳನ್ನು ಕಡಿಸಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕರು ವಿಚಾರಣೆ ನಡೆಸಿ, ಮರಗಳ ಕಡಿತದಿಂದಾಗಿ ನಷ್ಟವುಂಟಾಗಿದೆ. ಕೂಡಲೇ ಪರ್ಯಾಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.