
ಶಿವಮೊಗ್ಗ :- ಗೋಹತ್ಯೆ ಸಂಪೂರ್ಣ ನಿಲ್ಲಬೇಕು. ಅದಕ್ಕೆ ಕಠಿಣ ಕಾನೂನು ಸಹ ಜಾರಿಗೆ ಬರಬೇಕು. ಅದು ಆಚರಣೆಯಲ್ಲೂ ಬರಬೇಕು. ಅಲ್ಲದೆ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಸರ್ಕಾರ ಘೋಷಣೆಮಾಡಬೇಕು ಎಂದು ಶ್ರೀ ಶೃಂಗೇರಿ ಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಸರ್ಕಾರವನ್ನು ಆಗ್ರಹಿಸಿದರು.
ಅವರು ನಿನ್ನೆ ಸಂಜೆ ನಗರದ ಅಲ್ಲಮಪ್ರಭು ಮೈದಾನದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಮಹಾಪೋಷಕತ್ವದಲ್ಲಿ ಅಸ್ತಿತ್ವಕ್ಕೆ ಬಂದ ಗೋವರ್ಧನ ಟ್ರಸ್ಟ್ನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತ ಮೇಲಿನಂತೆ ನುಡಿದರು. ಗೋವರ್ಧನ ಟ್ರಸ್ಟಿನಿಂದ ಗೋರಕ್ಷಣಾ ಕಾರ್ಯ ಉತ್ತಮವಾಗಿ ನಡೆಯಲಿ. ಗೋವಿನ ರಕ್ಷಣೆ ನಮ್ಮೆಲರ ಹೊಣೆ ಎಂಬ ಧ್ಯೇಯ ವಾಕ್ಯ ಸತ್ಯವಾಗಿದೆ. ನಮ್ಮ ದೇಶದ ಮೇಲೆ ಎಷ್ಟೇ ಅತಿಕ್ರಮಣವಾದರೂ ಸನಾತನ ಧರ್ಮ ಉಳಿದಿದೆ ಎಂದರೆ ಅದು ಶ್ರೀ ಶಂಕರ ಭಗವತ್ಪಾದರ ಶ್ರಮದಿಂದ ಮತ್ತು ಅವರು ಹಾಕಿಕೊಟ್ಟ ಭದ್ರ ಬುನಾದಿಯಿಂದ ಎಂದರು.

ನಮ್ಮ ದೇಶದ ಮೇಲೆ ವಿದೇಶಿಗಳಿಂದ ಆಕ್ರಮಣವಾದಷ್ಟು ಜಗತ್ತಿನಲ್ಲಿ ಬೇರಾವ ದೇಶಗಳ ಮೇಲೂ ನಡೆದಿಲ್ಲ. ಸಮಾಜಕ್ಕೆ ಬೇಕಾದ, ಪ್ರತಿ ಕಾಲಕ್ಕೂ ಬೇಕಾದ ಉಪದೇಶವನ್ನು ಶ್ರೀ ಶಂಕರಾಚಾರ್ಯರು ಮಾಡಿದ್ದಾರೆ. ಪ್ರಶ್ನೋತ್ತರ ಮಾಲಿಕಾದಲ್ಲಿ ಶ್ರೀ ಶಂಕರಾಚಾರ್ಯರು ಹೇಳಿರುವುದೇನೆಂದರೆ, ನಮ್ಮ ಜನ್ಮದ ನಂತರ ತಾಯಿಯಂತೆ ಯಾರನ್ನು ನೋಡಬೇಕು ಎಂಬುದಕ್ಕೆ ಗೋವನ್ನು ನೋಡಬೇಕು ಎಂದಿದ್ದಾರೆ. ಅದ್ದರಿಂದ ನಾವು ಗೋವನ್ನು ಗೋಮಾತಾ ಎಂದು ಕರೆದಿದ್ದೇವೆ. ಮಹಾಪುರುಷರೆಲ್ಲರ ಜೀವನ ದರ್ಶನವನ್ನು ನೋಡಿದರೆ ಅವರೆಲ್ಲಾ ತಾಯಿಯನ್ನು ಪೂಜ್ಯ ಭಾವನೆಯಿಂದ ನೋಡಿದ್ದಾರೆ ಎಂದು ಪೂಜ್ಯರು ನುಡಿದರು.
ಗೋಹತ್ಯೆ ಮಹಾ ಪಾಪ. ಇದನ್ನು ಜನ ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ದೇಶದಲ್ಲಿನ ಎಲ್ಲ ತೊಂದರೆಗಳು ನಾಶವಾಗುತ್ತವೆ. ಇದಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು. ಪ್ರಾಣಿಪ್ರಿಯರಿಗೆ ಗೋಹತ್ಯೆ ಯಾಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು. ನಾಯಿ ಪ್ರಿಯರು ನಾಯಿಯ ಮೇಲೆ ಕ್ರಮ ಕೈಗೊಂಡಾಗ ನ್ಯಾಯಾಲಯಕ್ಕೆ ಹೋಗುತ್ತಾರೆ. ನಿರಂತರ ಗೋಹತ್ಯೆ ಆದರೂ ಕೂಡ ಏಕೆ ಸುಮ್ಮನಿದ್ದಾರೋ ಗೊತ್ತಿಲ್ಲ ಎಂದರು.
ಗೋಶಾಲೆ ನಡೆಸುವುದು ಸುಲಭವಲ್ಲ. ಅದರ ಪರಿಶ್ರಮ ನನಗೆ ಗೊತ್ತು. ಲಾಭಕ್ಕೋಸ್ಕರ ಗೋಶಾಲೆ ಅಲ್ಲ. ಗೋ ರಕ್ಷಣೆಗಾಗಿ ಮಾತ್ರ ಗೋಶಾಲೆ ಮಾಡಬೇಕು, ಪ್ರಾರಂಭದಲ್ಲಿ ಇದ್ದ ಉತ್ಸಾಹ ಕೊನೆಯವರೆಗೂ ಕಾಪಾಡಿಕೊಂಡು ಮುಂದುವರಿಸಿಕೊಂಡು ಹೋಗಬೇಕು. ಗೋರಕ್ಷಣೆಗೆ ಬೇಕಾದ ಸಂಪತ್ತು ಸಮಾಜದಲ್ಲಿ ಎಲ್ಲರಲ್ಲೂ ಇದೆ. ಒಳ್ಲೆಯ ಕೆಲಸಕ್ಕೆ ಎಲ್ಲರೂ ಸಹಕಾರ, ಸಹಾಯ ಮಾಡಬೇಕು ಎಂದರು.
ಶ್ರೀಶೃಂಗೇರಿ ಶಾರದಾಂಬ ಪೀಠದಿಂದ ಆಶೀರ್ವಾದಪೂರ್ವಕವಾಗಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಸ್ವಾಮಿಗಳು ಗೋವರ್ಧನ ಟ್ರಸ್ಟ್ನ ಮಹಾ ಪೋಷಕರಾದ ಕೆ.ಎಸ್. ಈಶ್ವರಪ್ಪನವರಿಗೆ ೩ಲಕ್ಷ ರೂ.ಗಳ ದೇಣಿಗೆ ನೀಡಿದರು. ಈ ನಿಧಿ ಅಕ್ಷಯಪಾತ್ರೆಯಾಗಿ ಬೆಳೆದು ನೂತನವಾಗಿ ಆರಂಭಿಸಿದ ಗೋಶಾಲೆ ಉತ್ತಮವಾಗಿ ಉನ್ನತಿ ಸಾಧಿಸಲಿ ಎಂದು ಆಶೀರ್ವದಿಸಿದರು. ಅಲ್ಲದೆ ಈ ರೀತಿಯ ಕೆಲಸ ಎಲ್ಲಾ ಕಡೆ ನಡೆಯಲಿ. ಗೋಸಂತತಿ ವೃದ್ಧಿಯಾಗಲಿ, ಗೋಮಾತೆಯ ಸೇವೆಯಿಂದ ದೇಶ ಸುಭಿಕ್ಷವಾಗಲಿ ಎಂದು ಹಾರೈಸಿದರು.
ಗೋವರ್ಧನ ಟ್ರಸ್ಟ್ನ ಮಹಾಪೋಷಕ ಕೆ.ಎಸ್.ಈಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಜೀವ ಕೊಟ್ಟಾದರೂ ಗೋ ಸಂರಕ್ಷಣೆ ಮಾಡುತ್ತೇವೆ ಅದಕ್ಕಾಗಿಯೇ ಈ ಗೋವರ್ಧನ ಟ್ರಸ್ಟ್ ಅಸ್ಥಿತ್ವಕ್ಕೆ ಬಂದಿದೆ. ಈಗಾಗಲೇ ನಗರದಲ್ಲಿ ಕಾರ್ಯಾಚರಿಸುತ್ತಿರುವ ಮೂರು ಗೋಶಾಲೆಗಳಿಗೆ ಯಾವುದೇ ರೀತಿಯ ಕೊರತೆ ಬಾರದ ರೀತಿಯಲ್ಲಿ ಈ ಟ್ರಸ್ಟ್ ಸಹಕಾರ ನೀಡಲಿದೆ. ಅಲ್ಲದೆ ಇವತ್ತು ಮೂರು ಗೋಶಾಲೆಗೆ ತಲಾ ೧ಟ್ರ್ಯಾಕ್ಟರ್ ಮೇವು ನೀಡಲಾಗಿದೆ. ಮತ್ತು ದಾನಿಗಳ ಸಹಕಾರದಿಂದ ಚಟ್ನಳ್ಳಿಯಲ್ಲಿ ೬ಎಕರೆ ಜಮೀನಿನಲ್ಲಿ ಮೇವು ಬೆಳೆಯಲು ಹೊಂಬುಜ ಜೈನ ಗುರುಗಳು ಭಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಪೂಜ್ಯರು ೨ಲಕ್ಷ ರೂ. ದೇಣಿಗೆ ಸಹ ನೀಡಿದ್ದಾರೆ. ಹಾಗೆಯೇ ಗೋವರ್ಧನ ಟ್ರಸ್ಟ್ ನಿರ್ವಹಣೆಗೆ ಪ್ರತೀ ಮನೆಯಿಂದ ತಿಂಗಳಿಗೆ ೧೦೦ರೂ. ಗಳಂತೆ ಸಂಗ್ರಹಿಸಲಾಗುತ್ತಿದ್ದು, ಈಗಾಗಲೇ ೫ ಸಾವಿರ ಸದಸ್ಯರು ಹೆಸರು ನೊಂದಾಯಿಸಿ, ನೆರವು ನೀಡಿದ್ದಾರೆ. ಮುಂದೆಯೂ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಮೂರು ಗೋಶಾಲೆಯ ಪ್ರಮುಖರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶಂಕರಮಠದಿಂದ ಶ್ರೀಗಳನ್ನು ಗೋಭಕ್ತರು ಬೃಹತ್ ಬೈಕ್ ರ್ಯಾಲಿಯ ಮೂಲಕ ಮೆರವಣಿಗೆಯಲ್ಲಿ ಸ್ವಾಗತಿಸಿದರು. ದೈವಜ್ಞ ಕಲ್ಯಾಣ ಮಂದಿರದಿಂದ ಅಲ್ಲಮಪ್ರಭು ಮೈದಾನದವರೆಗೆ ಕಲಾತಂಡಗಳೊಂದಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು. ಶ್ರೀಗಳು ಮೇವುಗಳ ವಾಹನಕ್ಕೆ ಹಾಗೂ ಆಂಬುಲೆನ್ಸ್ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಅಧ್ಯಕ್ಷ ಹಾಗೂ ಹಿಂದು ಯುವ ಹುಲಿ ಎಂದೇ ಖ್ಯಾತರಾದ ಕೆ.ಈ. ಕಾಂತೇಶ್, ಮಹಾಪೋಷಕರಾದ ಹೆಚ್.ಎಸ್. ಶಿವಶಂಕರ್, ಯೋಗಾಚಾರ್ಯ ಸಿ.ವಿ. ರುದ್ರಾರಾಧ್ಯ, ಶೃಂಗೇರಿ ಹೆಚ್.ಎಸ್. ನಾಗರಾಜ, ಕೆ.ಸಿ. ನಟರಾಜ ಭಾಗವತ್, ಆರ್.ಎಸ್.ಎಸ್. ಪ್ರಮುಖ್ ಬಿ.ಎ. ರಂಗನಾಥ್, ಪದಾಧಿಕಾರಿಗಳಾದ ರಾಘವೇಂದ್ರಸ್ವಾಮಿ, ಮಹಾಲಿಂಗಯ್ಯ ಶಾಸ್ತ್ರಿ, ಉಮೇಶ್ ಆರಾಧ್ಯ, ನವ್ಯಶ್ರೀ ನಾಗೇಶ್, ಹೆಚ್.ಬಿ. ರಮೇಶ್ ಬಾಬು ಜಾಧವ್, ಎಸ್.ಕೆ. ಶೇಷಾಚಲ, ಹೆಚ್.ಎಸ್.ಶಿವಕುಮಾರ್, ಸಂದೇಶ್ ಉಪಾಧ್ಯ, ಎನ್. ಉಮಾಪತಿ, ಹೆಚ್.ಶಿವರಾಜ್, ಈ ವಿಶ್ವಾಸ್, ರಾಮ್ ಸ್ವರೂಪ್, ಮೋಹನ್ ಜಾಧವ್, ಎಂ.ಜಿ.ಬಾಲು, ಶ್ರೀಕಾಂತ್, ಶುಭಾ ರಾಘವೇಂದ್ರ, ಉಮಾಮೂರ್ತಿ, ವಿನಯ್, ಚೇತನ್ ಮೊದಲಾದವರಿದ್ದರು.