
ಶಿವಮೊಗ್ಗ :- ಮತಗಳ್ಳತನದ ವಿರುದ್ಧ ರಾಷ್ಟ್ರೀಯ ನಾಯಕ ರಾಹುಲ್ಗಾಂಧಿಯವರು ಅಭಿಯಾನ ಆರಂಭಿಸಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಕೂಡ ಕೆಪಿಸಿಸಿ ನಿರ್ದೇಶನದಂತೆ ಬೂತ್ ಮಟ್ಟದಿಂದ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಇಡೀ ರಾಷ್ಟ್ರದಲ್ಲಿ ಹಲವು ಕಡೆ ಮತದಾನದ ಕಳುವಿನ ಬಗ್ಗೆ ರಾಹುಲ್ಗಾಂಧಿಯವರು ಹೋರಾಟ ನಡೆಸುತ್ತಾ ಬಂದಿದ್ದಾರೆ. ಅನೇಕ ಕಡೆ ಹಲವರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಕಂಡು ಬಂದಿದೆ. ಗ್ರಾಮೀಣ ಪ್ರದೇಶಕ್ಕಿಂತ ನಗರದ ಪ್ರದೇಶದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಈ ಬಗ್ಗೆ ಜಗೃತಿ ವಹಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲೆಯಲ್ಲಿರುವ ೧೪ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಮೂಲಕ ಜಗೃತಿ ಮೂಡಿಸಲಾಗುವುದು ಎಂದರು.
ದೇಶಾದ್ಯಂತ ಈ ಅಭಿಯಾನವು ಸೆ.೧೫ರಿಂದ ಅಕ್ಟೋಬರ್ ೧೫ರ ವರೆಗೆ ನಡೆಯಲಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ಟೋಬರ್ ೨೨ರಂದು ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಈ ಅಭಿಯಾನದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವುದರ ಮೂಲಕ ಈ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ ಎಂದರು.
ಚುನಾವಣೆಗೆ ಮೊದಲೇ ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ. ಇದು ಬೂತ್ ಮಟ್ಟದಿಂದ ಆಗಬೇಕು. ಈಗಾಗಲೇ ಇದಕ್ಕಾಗಿ ವೀಕ್ಷಕರುಗಳನ್ನು ನೇಮಕಮಾಡಿಕೊಳ್ಳಲಾಗುತ್ತಿದೆ. ಬೂತ್ಮಟ್ಟದ ನಾಯಕರುಗಳು ಈ ಬಗ್ಗೆ ಮತಪಟ್ಟಿಯನ್ನು ಪಡೆದುಕೊಂಡು ಪರಿಶೀಲಿಸಬೇಕು. ವ್ಯತ್ಯಾಸಗಳಿದ್ದರೆ ಬಿಎಲ್ಓ ಗಮನಕ್ಕೆ ತಂದು ಸರಿಪಡಿಸಬೇಕು. ಈಗಾಗಲೇ ಹಲವು ಬ್ಲಾಕ್ ಸಮಿತಿಗಳಲ್ಲಿ ಸಭೆಗಳನ್ನು ನಡೆಸಿದ್ದೇವೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸಂಸದ ಬಿ.ವೈ. ರಾಘವೇಂದ್ರರವರು ಅರ್ಥವಿಲ್ಲದ ಮಾತನಾಡಿದ್ದಾರೆ. ಅವರಿಗೆ ಗೊತ್ತಿರಲಿ. ವಿಮಾನ ನಿಲ್ದಾಣ ಎಂದರೆ ಕೇವಲ ಕೇಂದ್ರ ಸರ್ಕಾರದ್ದು ಮಾತ್ರವಲ್ಲ. ರಾಜ್ಯ ಸರ್ಕಾರದ ಪಾತ್ರವೂ ಇರುತ್ತದೆ. ನೆಲ ನಮ್ಮದು. ಅದನ್ನು ವಶಪಡಿಸಿಕೊಳ್ಳುವಾಗ ರಾಜ್ಯ ಸರ್ಕಾರ ರೈತರಿಗೆ ಹಣ ನೀಡಿದೆ. ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟು ತಪ್ಪುಮಾಡಿರುವೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೊಡದೆ ಇವರೇನು ತಮ್ಮ ಜೇಬಿನಲ್ಲಿಟ್ಟುಕೊಳ್ಳುತ್ತಿದ್ದಾರಾ ಎಂದು ಟೀಕಿಸಿದ ಅವರು, ಈಗಾಗಲೇ ರಾಜ್ಯ ಸರ್ಕಾರ ನೈಟ್ ಲ್ಯಾಂಡಿಂಗ್ಗೆ ಸಂಬಂಧಪಟ್ಟಂತೆ ೬.೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು.
ಜತಿ ಗಣತಿ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅರ್ಥವಿಲ್ಲದ ಮಾತನಾಡುತ್ತಿದ್ದಾರೆ. ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದಾಗ, ಈಶ್ವರಪ್ಪನವರದ್ದು ಅಡ್ಡಮಾತು ಇದ್ದೇ ಇರುತ್ತದೆ. ಸಿದ್ಧರಾಮಯ್ಯ ಅವರಿಗೆ ಬೈದರೆ ಮಾತ್ರ ಚಾಲ್ತಿಯಲ್ಲಿರುಬಹುದು ಎಂದು ಕೊಂಡಿದ್ದಾರೆ. ರಾಯಣ್ಣ ಬ್ರೀಗೇಡ್ ಕಟ್ಟಿದ್ದು ಅವರು ತಾನೇ. ಕಾಂತ್ರಾಜ್ ವರದಿ ಒಪ್ಪಿಕೊಂಡಿದ್ದರೆ ಈ ಗೊಂದಲವೇ ಇರುತ್ತಿರಲಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಲೀಂಪಾಷಾ, ಶಿವುಕುಮಾರ್, ಪ್ರಮುಖರಾದ ಶಿವಣ್ಣ, ಮಂಜುನಾಥ್ ಬಾಬು, ಅರ್ಚನಾ ನಿರಂಜನ, ನಳಿನಿ, ಪವನ್ಕುಮಾರ್, ಯು. ಶಿವಾನಂದ್, ಸೈಯದ್ ವಾಹಿದ್ ಅಡ್ಡು ಉಪಸ್ಥಿತರಿದ್ದರು.