ಶಿವಮೊಗ್ಗ :- ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ನ್ಯಾಯಾಲಯದ ಮತ್ತು ಸರ್ಕಾರದ ಆದೇಶದನ್ವಯ ದಂಡ ಕಟ್ಟಲು ವಿನಾಯಿತಿ ಪ್ರಕಟವಾಗಿದ್ದು, ಸೆ. 12ರ ಒಳಗೆ ದಂಡ ಕಟ್ಟುವವರಿಗೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ. ಇದರ ಅನ್ವಯ ನಗರದ ಬಹುತೇಕ ವೃತ್ತಗಳಲ್ಲಿ ಸಾರ್ವಜನಿಕರು ಸಂಚಾರಿ ನಿಯಮ ಉಲ್ಲಂಘನೆಯ ದಂಡ ಕಟ್ಟುತ್ತಿರುವುದು ಇಂದು ನಗರದಲ್ಲಿ ಕಂಡು ಬಂದಿತು.
ನಗರದಲ್ಲಿ ಸಂಚಾರಿ ಪೂರ್ವ ಮತ್ತು ಸಂಚಾರಿ ಪಶ್ಚಿಮ ಠಾಣೆ ಹಾಗೂ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಮಹಾವೀರ ವೃತ್ತ, ಅಶೋಕ ಸರ್ಕಲ್, ಎ.ಎ. ಸರ್ಕಲ್, ಗೋಪಿಸರ್ಕಲ್, ಶಿವಪ್ಪನಾಯಕ ವೃತ್ತ, ರೈಲ್ವೆ ಸ್ಟೇಷನ್ ವೃತ್ತ, ಉಷಾನರ್ಸಿಂಗ್ ಹೋಂ ಸರ್ಕಲ್ ಬಳಿ, ಸಂಚಾರಿ ಎಎಸ್ಐ ಮತ್ತು ಪಿಎಸ್ಐ ಹಾಗೂ ಮೇಲ್ಪಟ್ಟ ಅಧಿಕಾರಿಗಳ ಮುಖಾಂತರ ಸ್ಥಳದಲ್ಲೇ ದಂಡದ ಮೊತ್ತವನ್ನು ಕಟ್ಟಬಹುದಾಗಿದೆ.
ಈಗಾಗಲೇ ಜಿಲ್ಲಾ ರಕ್ಷಣಾಧಿಕಾರಿಗಳು ಕೂಡ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಅಲ್ಲದೆ ಮುಂದಿನ ದಿನಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರು ಟ್ರಾಫಿಕ್ ಪೊಲೀಸರ ಬಳಿ ತಮ್ಮ ವಾಹನದ ಸಂಖ್ಯೆಯನ್ನು ತಿಳಿಸಿದರೆ ಅವರು ದಂಡದ ಮೊತ್ತವನ್ನು ಸ್ಥಳದಲ್ಲೇ ತಿಳಿಸುತ್ತಾರೆ. ಮೊಬೈಲ್ನಲ್ಲಿ ಗೂಗಲ್ಗೆ ಹೋಗಿ ಇ-ಚಲನ್ ಸೈಟ್ಗೆ ಹೋದರೆ ನಿಮ್ಮ ವಾಹನದ ದಂಡದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.