ಸಾಗರ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ವಿಶ್ವವಿಖ್ಯಾತ ಜೋಗ ಜಲಪಾತ ಉಕ್ಕಿ ಹರಿಯುತ್ತಿದೆ. ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ 11 ಗೇಟ್‍ಗಳನ್ನು ತೆರೆದು 35ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಕ್ಕೆ ಬಿಡಲಾಗಿದೆ.
ನೀರು ಹೊರಕ್ಕೆ ಬಿಟ್ಟಿರುವುದರಿಂದ ಚೈನಾಗೇಟ್ ಉಕ್ಕಿ ಹರಿಯುತ್ತಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜಲಾಶಯಕ್ಕೆ 40ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಡ್ಯಾಂ ರಕ್ಷಣೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಪ್ರವಾಸಿಗರ ಸಂಖ್ಯೆ ಇಳಿಮುಖ : ಗಣಪತಿ ಹಬ್ಬದ ದಿನ ಜೋಗ ಜಲಪಾತಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಕಡಿಮೆ. ವಿಪರೀತ ಮಳೆಯಿಂದಾಗಿ ಜನರು ಹೊರಗೆ ಬಂದಿರಲಿಲ್ಲ. ಆದರೆ ಗುರುವಾರ-ಶುಕ್ರವಾರ ಜೋಗ ಜಲಪಾತ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ. 35ಸಾವಿರ ಕ್ಯೂಸೆಕ್ಸ್ ನೀರು ಹೊರಗೆ ಬಿಟ್ಟಿರುವುದರಿಂದ ಜೋಗದ ನಾಲ್ಕೂ ಜಲಪಾತಗಳ ಜೊತೆ ಮಾವಿನಗುಂಡಿ ಜಲಪಾತ ಸಹ ಮೈತುಂಬಿಕೊಂಡಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.