google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಸಾಗರ ತಾಲ್ಲೂಕಿನ ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದಾಗಿ ಈ ಭಾಗದ ಜನರ ಕನಸು ನನಸಾಗುತ್ತಿದೆ. ಶೇ. 80 ರಷ್ಟು ಕೆಲಸ ಆಗಿದ್ದು ಮೇ ತಿಂಗಳ ವೇಳೆಗೆ ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಶುಕ್ರವಾರ ಸಾಗರ ತಾಲ್ಲೂಕಿನ ಹಸುರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು. ಸಾಗರ ತಾಲ್ಲೂಕಿನ ಹಸಿರುಮಕ್ಕಿಯಲ್ಲಿ ರಾಜ್ಯ ಸರ್ಕಾರದಿಂದ ರೂ. 125.67 ಕೋಟಿ ಮೊತ್ತದಲ್ಲಿ‌ ಹಸಿರುಮಕ್ಕಿ‌ ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. 1.115 ಕಿ ಲೋ ಮೀಟರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಸಿರುಮಕ್ಕಿ ಕಡೆ 345 ಮೀ ,ಕೊಲ್ಲೂರು ಕಡೆ 165 ಮೀ ಕಾಮಗಾರಿ ನಡೆಯುತ್ತಿದೆ. ಸೇತುವೆ ಅಗಲ 8.50 ಮೀ(ದ್ವಿಪಥ ಸಂಚಾರ), 34 ತಳಪಾಯಗಳಿವೆ. ಈಗ ಶೇ. 80 ಕಾಮಗಾರಿ ರ್ಣಗೊಂಡಿದೆ.
ರೂ. 25 ಕೋಟಿ ಹಣ ಬಿಡುಗಡೆ ಬಾಕಿ ಇದೆ. ನಮ್ಮ ಸರ್ಕಾರ ಬಂದ ಮೇಲೆ ಕ್ಷಿಪ್ರಗತಿಯಲ್ಲಿ, ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದು, ಹಣದ ಕೊರತೆ ಇಲ್ಲ. ಆದಷ್ಟು ಬೇಗ ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ. ಕೆಲವು ಶರಾವತಿ ಸಂತ್ರಸ್ತರಿಂದ ತಮ್ಮ ಭಾಗದಲ್ಲಿ‌ ಸರ್ವೇ ಆಗಿಲ್ಲ, ತಮ್ಮ ಬ್ಲಾಕ್ ನ್ನು ಸರ್ವೇ ಯಲ್ಲಿ ಸೇರಿಸಿಲ್ಲವೆಂಬ ದೂರುಗಳಿವೆ. ನಾವು ಸಂತ್ರಸ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಲಿಕ್ಕೆ ಬಿಡುವುದಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ಏನೇ ಸಮಸ್ಯೆಗಳಿದ್ದರೂ ಅಹವಾಲು ನೀಡಿ, ಸಮಸ್ಯೆಗಳನ್ನು‌ ಖಂಡಿತವಾಗಿ ಬಗೆಹರಿಸುತ್ತೇವೆ. ಆತಂಕಕ್ಕೆ ಒಳಗಾಗುವುದು ಬೇಡ ಎಂದು ಭರವಸೆ ನೀಡಿದರು.

ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ನೆನೆಗುದಿಗೆ ಬಿದ್ದಿದ್ದ ಈ ಸೇತುವೆ ಕಾಮಗಾರಿ ಬಗ್ಗೆ ಬೆಳಗಾಂ ಅಧಿವೇಶನದಲ್ಲಿ ಮಾತನಾಡಿ, ಕಾಮಗಾರಿ ಚುರುಕುಗೊಳಿಸಲು ಅನುದಾನಕ್ಕೆ ಕೋರಿಕೆ ಸಲ್ಲಿಸಿದ ಮೇರೆಗೆ ಸರ್ಕಾರ ಮೊದಲ ಹಂತದಲ್ಲಿ‌ ರೂ. 45 ಕೋಟಿ ಹಣ ಬಿಡುಗಡೆ ಮಾಡಿದ್ದು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ‌ ಕ್ಷಿಪ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನು 26 ಮೀಟರ್ ರಸ್ತೆ ಮಾತ್ರ ಬಾಕಿ ಇದೆ. ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದ ಮದ್ಯ ಕರ್ನಾಟಕ (ದಕ್ಷಿಣ ಒಳನಾಡಿಗೆ), ಉತ್ತರ ಕರ್ನಾಟಕದಿಂದ ಕರಾವಳಿ ಭಾಗಕ್ಕೆ ಸಂಪರ್ಕ ಸಾಧ್ಯ ವಾಗಲಿದೆ. ಮಂಗಳೂರು ಪಟ್ಟಣ, ಮಂಗಳೂರು ಬಂದರು, ಕುಂದಾಪುರ ಪಟ್ಟಣಗಳಿಗೆ ಸಹ ಸಮೀಪವಾಗಲಿದೆ. ಸಾಗರ ತಾಲ್ಲೂಕಿನಿಂದ ಕೊಲ್ಲೂರು, ಉಡುಪಿ ಮುಂತಾದ ಯಾತ್ರಾಸ್ಥಳಗಳಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಸ್ಥಳೀಯ ಶಾಲಾ ಮಕ್ಕಳು ಶಾಲೆಗೆ ಹೋಗಲು ಹಾಗೂ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ ಎಂದರು.

ಈ ವೇಳೆ ಸ್ಥಳೀಯ ಜನ ಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *