
ಶಿವಮೊಗ್ಗ :- ಬದುಕಿನ ಪ್ರತಿ ಕ್ಷಣವು ಕವಿಯಾಗಿ ಇರುವುದು ಹೇಗೆ ಎಂದು ತೋರಿಸಿಕೊಟ್ಟವರು ಎಚ್.ಎಸ್. ವೆಂಕಟೇಶಮೂರ್ತಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಗೀತ ಗಾಯನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿ, ನಿರಂತರ ಶೋಧನೆ ಎಂಬುದು ಅವರ ಕಾವ್ಯದಲ್ಲಿ ಸದಾ ಮೇಳೈಸುತ್ತಿತ್ತು. ವಾಸ್ತವ ಲೋಕದ ವಿಮರ್ಶೆಗೆ ಭಾವನೆಯ ಸ್ಪರ್ಶ ನೀಡಿದ ಅದ್ಭುತ ಕವಿ. ಬಹುಮುಖಿ ವ್ಯಕ್ತಿತ್ವದ ಅವರು ಕಾವ್ಯದ ಜೊತೆಗೆ ಸಂಗೀತಕ್ಕೂ ಪ್ರಾಧಾನ್ಯತೆ ನೀಡಿದ್ದರು. ತಾವು ರಚಿಸಿದ ಗೀತೆಗಳಿಗೆ ಮತ್ತಷ್ಟು ಭಾವದ ಸ್ಪರ್ಶ ನೀಡುವಲ್ಲಿ ಸಂಗೀತದ ಮೂಲಕ ಪ್ರಯೋಗ ಮಾಡುತ್ತಿದ್ದರು.
ತಮ್ಮ ಹಿರಿಯರ, ಸಮಾನ ಕಾಲಮಾನದವರ ಜೊತೆಯಲ್ಲಿ ಬೆರೆತಂತೆ, ಕಿರಿಯರ ಜೊತೆಯಲ್ಲಿಯೂ ಅಷ್ಟೇ ಸ್ನೇಹಯುತವಾಗಿ ಬೆರೆಯುತ್ತಿದ್ದರು. ಅದು ಕಾವ್ಯ ಸೃಷ್ಟಿಗೆ ಅನೇಕ ಅನುಭವಾಧಾರಿತ ವಿಷಯಗಳನ್ನು ನೀಡಿತು. ಪ್ರತಿಯೊಂದು ಗೀತೆಗಳಲ್ಲಿ ಮಲ್ಯಗಳನ್ನು ಕಟ್ಟಿಕೊಟ್ಟವರು ಎಚ್.ಎಸ್.ವಿ ಅವರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿ, ಎಚ್‌ಎಸ್‌ವಿ ಅವರು ಸಮಷ್ಟಿಯ ಪ್ರeಯೆಡೆಗೆ ಸಾಗುವ ಜಗೃತಿ ನೀಡಿದರು. ಒಳ್ಳೆಯ ವಿಚಾರಗಳು ಮಾನಸಿಕ ಮತ್ತು ದೈಹಿಕ ಪ್ರಬುದ್ಧಗೆ ಕಾರಣವಾಗುತ್ತದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಾಮಾಜಿಕ ಅಭಿಯಂತರರಾಗಿ ಬದುಕಿದವರು ಎಚ್.ಎಸ್.ವೆಂಕಟೇಶಮೂರ್ತಿ ಅವರು ಎಂದು ಹೇಳಿದರು.
ವೇದಿಕೆಯಲ್ಲಿ ಪ್ರಾಧ್ಯಾಪಕ ಡಾ.ಪ್ರಕಾಶ್, ಸಹ ಪ್ರಾಧ್ಯಾಪಕ ಡಾ.ಮಂಜು.ಎನ್.ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಪ್ರಶಿಕ್ಷಣಾರ್ಥಿಗಳು ಎಚ್.ಎಸ್.ವಿ ಅವರ ಗೀತೆಗಳನ್ನು ಹಾಡಿದರು.
