
ಶಿವಮೊಗ್ಗ: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ನಮನ ಕೆ. ಅವರನ್ನು ಇಂದು ಎಲ್.ಬಿ.ಎಸ್. ನಗರದ ಆರ್ಯ ಪಿಯು ಕಾಲೇಜಿನಲ್ಲಿ ಅವರ ತಂದೆ, ತಾಯಿಯೊಂದಿಗೆ ಸಂಭ್ರಮದಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ನಮನ, ನನ್ನ ಈ ಸಾಧನೆಗೆ ನಮ್ಮ ಶಾಲೆಯ ಶಿಕ್ಷಕ ವೃಂದದವರು ಮತ್ತು ಪೋಷಕರು ಕಾರಣರಾಗಿದ್ದಾರೆ. ಶಾಲೆಯ ಎಲ್ಲಾ ಟೀಚರ್ಸ್ ನನಗೆ ಪ್ರೋತ್ಸಾಹ ನೀಡಿ ನನ್ನ ಸಾಧನೆಗೆ ಕಾರಣರಾಗಿದ್ದಾರೆ. ಅವರು ಹೇಳಿಕೊಟ್ಟ ಪಾಠಗಳನ್ನು ಅಂದೇ ಅವರಿಗೆ ಒಪ್ಪಿಸುತ್ತಿದ್ದೆ. ಕಷ್ಟಪಟ್ಟರೆ ಯಾವುದೂ ಕಷ್ಟವಲ್ಲ. ಮುಂದೆ ನನಗೆ ವೈದ್ಯೆಯಾಗುವ ಕನಸಿದೆ. ಇವರದೇ ಆದ ಆರ್ಯ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸುವೆ ಎಂದರು.

ಗ್ಲೋಬಲ್ ಎಜುಕೇಷನ್ ಸೊಸೈಟಿ ಮತ್ತು ಶರಾವತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ನಾವು ಶಾಲೆ ಆರಂಭಿಸಿ ೧೮ ವರ್ಷಗಳಾದವು. ರಾಜ್ಯದಲ್ಲಿಯೇ ಪ್ರಥಮ ರ್ಯಾಂಕ್ ಪಡೆಯಬೇಕು ಎಂಬ ಬಹುದಿನದ ಕನಸು ಇಂದು ನನಸಾಗಿದೆ. ಕಳೆದ ಬಾರಿ ಕೇವಲ ಒಂದು ಅಂಕದಿಂದ ಇಬ್ಬರು ವಿದ್ಯಾರ್ಥಿನಿಯರು ಮೊದಲ ರ್ಯಾಂಕ್ ಪಡೆಯುವಲ್ಲಿ ವಿಫಲರಾಗಿ ದ್ದರು. ಈಗ ನಾವು ಸಫಲ ರಾಗಿದ್ದೇವೆ. ನನಗೆ ಸಂತಸವಾಗಿದೆ. ಈ ವಿದ್ಯಾರ್ಥಿನಿಗೆ ನಮ್ಮದೇ ಆದ ಆರ್ಯ ಪಿಯು ಕಾಲೇಜಿನಲ್ಲಿ ಉಚಿತ ವಿದ್ಯಾಭ್ಯಾಸ ನೀಡುತ್ತೇವೆ. ಅಷ್ಟೇ ಅಲ್ಲ, ಮುಂದಿನ ಬಾರಿ ಪಿಯುನಲ್ಲಿ ಕಾಲೇಜಿನಲ್ಲಿ ಟಾಪರ್ ಆಗಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಅಮೆರಿಕದ ನಾಸಾಕ್ಕೆ ಶೈಕ್ಷಣಿಕ ಪ್ರವಾಸವನ್ನು ಉಚಿತವಾಗಿ ನೀಡುತ್ತೇವೆ ಎಂದರು.

ನಮನ ಕೆ. ಅವರ ಸಾಧನೆಗೆ ಡಿವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಂಗನಾಥಯ್ಯ, ನಿವೃತ್ತ ಪ್ರಾಧ್ಯಾಪಕ ಪದ್ಮನಾಭ್, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಸುನಿತಾದೇವಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಮತ್ತಷ್ಟು ಸಾಧನೆ ಮಾಡಲಿ ಎಂದರು.
ಕಾರ್ಯಕ್ರಮದಲ್ಲಿ ನಮನ ತಂದೆ ಕೃಷ್ಣಮೂರ್ತಿ, ತಾಯಿ ಪದ್ಮಿನಿ ಉಪಸ್ಥಿತರಿದ್ದು ತಮ್ಮ ಮಗಳ ಸಾಧನೆಗೆ ಪ್ರಿಯದರ್ಶಿನಿ ಶಾಲೆಯ ಶಿಕ್ಷಕರೇ ಕಾರಣ ಎಂದರು.
