
ಶಿವಮೊಗ್ಗ :- ಜಿ.ಪಂ. ಕೆಪಿಡಿ ಸಭೆಯಲ್ಲಿ ಇಂದು ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಭಾನು ಮತ್ತು ಶಾಸಕ ಎಸ್.ಎನ್. ಚನ್ನಬಸಪ್ಪ ನಡುವಿನ ವಗ್ವಾದ ತಾರಕಕ್ಕೇರಿ ಗೊಂದಲ ಮಯ ವಾತಾವರಣ ಉಂಟಾಯಿತು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಅವ್ಯವಸ್ಥೆ ಆಗರವಾಗಿದೆ. ಆಸ್ಪತ್ರೆಯನ್ನು ಕಾಲೇಜು ನಿಯಂತ್ರಣದಿಂದ ಹೊರಗೆ ತರುವವರೆಗೆ ಸಾಮಾನ್ಯ ರೋಗಿಗಳ ಪಾಡು ಹೇಳತೀರದು. ಸಮಸ್ಯೆಗಳಿಗೆ ಸಿಮ್ಸ್ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಶಾಸಕಿ ಬಲ್ಕೀಶ್ ಭಾನು ಎದ್ದು ನಿಂತು ನೀವು ಅನಾವಶ್ಯಕ ವಿಚಾರಗಳನ್ನು ಡೈವರ್ಟ್ ಮಾಡುತ್ತಿದ್ದಿರಿ. ನಿಮಗೆ ವಿಧಾನಸಭಾ ಅಧ್ಯಕ್ಷರು ಅಮಾನತ್ತು ಮಾಡಿದ್ದಾರೆ. ನೀವು ಅಮಾನತ್ತು ಹಿಂಪಡೆಯದೆ ಈ ಸಭೆಗೆ ಬರುವಾಗಿಲ್ಲ ಎಂದಿದ್ದು, ಬಾರೀ ವಾಗ್ವಾದಕ್ಕೆ ಕಾರಣವಾಯಿತು.
ಶಾಸಕಿ ಚೆನ್ನಿ ಮಾತನಾಡಿ ನೀವ್ಯಾರೂ ನನಗೆ ಹೇಳುವುದಕ್ಕೆ? ನಿಮಗೆ ಯಾರೂ ಹಕ್ಕು ಕೊಟ್ಟಿದ್ದಾರೆ ? ನನಗೆ ಸಭೆಗೆ ಹಾಜರಾಗಲು ಆಮಂತ್ರಣ ಬಂದಿತ್ತು. ನಾನು ಬಂದಿದ್ದೇನೆ. ಶಾಸನ ಸಭೆಯಲ್ಲಿ ಅಮಾನತ್ತು ಆದ ತಕ್ಷಣ ಶಾಸಕರ ಹಕ್ಕು ಮೊಟಕಾಗುವುದಿಲ್ಲ. ಸಮಿತಿ ಸಭೆಗಳಿಗೆ ಭಾಗವಹಿಸಬಾರದು ಅಷ್ಟೇ. ನಿಮಗೆ ಯಾರೂ ಹೇಳಿಕೊಟ್ಟಿದ್ದು ಎಂದರು.
ಸಭೆಗೆ ಕರೆಯಿಸಿ ಅವಮಾನ ಮಾಡುತ್ತೀರ ಎಂದಾಗ ಅಧ್ಯಕ್ಷತೆ ವಹಿಸಿದ್ದ ಮಧುಬಂಗಾರಪ್ಪನವರು ಮಧ್ಯ ಪ್ರವೇಶಿಸಿ ಸಮಧಾನ ಮಾಡಲು ಯತ್ನಿಸಿದರು. ನೀವು ನನಗೆ ಅವಮಾನಿಸಿದ್ದೀರಿ. ನಿಮ್ಮ ತಲೆಗೆ ಬಂದಿದ್ದು ಮಾಡಿಕೊಳ್ಳಿ, ನಾನು ಈ ಸಭೆಯನ್ನು ಬಹಿಷ್ಕರಿಸಿ ತೆರಳುತ್ತೇನೆ ಎಂದು ಗುಡುಗಿದಾಗ, ಸಚಿವ ಮಧುಬಂಗಾರಪ್ಪ ಹೋಗುವುದು ಬಿಡುವುದ ನಿಮ್ಮ ಇಚ್ಛೆ. ಆದರೆ ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ಎಂದರು.
ಅದರ ನಡುವ ಬೇಳೂರು ಗೋಪಾಲಕೃಷ್ಣ ಹಾಗೂ ಚನ್ನಬಸಪ್ಪ ನಡುವೆ ವಾಗ್ವಾದ ತಾರಕಕ್ಕೇರಿತು. ಶಾಸಕಿ ಶಾರದ ಪೂರ್ಯನಾಯ್ಕ್ ಮತ್ತು ಡಿ.ಎಸ್.ಅರುಣ್ ಮಧ್ಯ ಪ್ರವೇಶಿಸಿ ಎಲ್ಲರನ್ನೂ ಸಮಾಧಾನಿಸಿದರು. ಸಚಿವ ಮಧು ಬಂಗಾರಪ್ಪ ಕೂಡ ಕ್ಷಮೆ ಕೇಳುವುದರ ಮೂಲಕ ಸಭೆಯನ್ನು ನಿಯಂತ್ರಣಕ್ಕೆ ತಂದರು.
ಕಳೆದ ಸಭೆಯ ಹಲವು ವಿಚಾರಗಳ ಮೇಲೆ ಇಂದು ಮುಂದುವರೆಯಿತು. ಶಾಸಕ ಚನ್ನಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ದೇವಾಲಯಗಳ ಸರ್ವೆ ನಡೆಯುತ್ತಿದೆ. ಆದರೆ ಅದೇ ವೇಗದಲ್ಲಿ ವಕ್ಪ್ ಆಸ್ತಿ ಬಗ್ಗೆ ಸರ್ವೆ ನಡೆಯುತ್ತಿಲ್ಲ. ದೇವಸ್ಥಾನವನ್ನೇ ಗುರಿಯಾಗಿರಿಸಿರುವುದು ಯಾಕೆ? ತಾರತಮ್ಯ ಯಾಕೆ? ದೇವಾಲಯಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ಹಣ ಬಿಡುಗಡೆ ಆಗುತ್ತಿಲ್ಲ. ಬೇರೆ ಸಮುದಾಯದ ಮಂದಿರಗಳಿಗೆ ಆಗುತ್ತಿದೆ. ವಿಶೇಷ ಪ್ರಯತ್ನವು ಸಾಗುತ್ತಿದೆ. ಇದು ಸರಿಯಲ್ಲ ಎಂದಾಗ ಅಪರ ಜಿಲ್ಲಾಧಿಕಾರಿ ಮಾತನಾಡಿ, ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ನಿರ್ದೇಶನಗಳ ಮೇರೆಗೆ ಎಲ್ಲಾ ದೇವಾಲಯಗಳ ಸರ್ವೇ ಮಾಡಿ ವರದಿ ನೀಡಬೇಕಿದ್ದು, ಶೇ. ೭೦ರಷ್ಟು ಕಾರ್ಯ ಮುಗಿದಿದೆ. ತಾರತಮ್ಯದ ಪ್ರಶ್ನೆ ಬರುವುದಿಲ್ಲ. ಸರ್ಕಾರಿ ಆದೇಶ ಪಾಲಿಸುತ್ತಿದ್ದೇವೆ ಎಂದರು.
ಮಹಿಳಾ ಪ್ರಥಮ ದರ್ಜೆ ಕಾಲೇಜುಗೆ ನಗರ ಮಧ್ಯೆ ಇರುವ ಮೀನಾಕ್ಷಿ ಭವನದ ಪಕ್ಕದ ಕೆಪಿಎಸ್ಸಿ ಶಾಲಾ ವಠಾರದಲ್ಲಿ ಜಗ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದೇನೆ. ಅದು ಪಾಲಿಕೆಗೆ ಸೇರಿದ ಜಗವಾಗಿದೆ. ಸಚಿವರು ಮಹಿಳೆಯರಿಗೆ ಪ್ರಾಶಸ್ತ್ಯ ನೀಡಬೇಕು. ಕಾಲೇಜಿಗೆ ಜಗ ನೀಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಜಿಲ್ಲೆಗೆ ಇನ್ನೊಂದು ಸರ್ಕಾರಿ ಸುಸಜ್ಜಿತ ಶಾಲೆ ಮಂಜೂರಾಗಿದ್ದು, ಒಂದರಿಂದ ಪಿಯು ವರೆಗೆ ಅವಕಾಶವಿದ್ದು, ಅದಕ್ಕಾಗಿ ಜಗ ಬೇಕಾಗಿರುವುದರಿಂದ ಕಾಲೇಜಿಗೆ ಅಲ್ಲಿ ಜಗ ನೀಡುವುದು ಕಷ್ಟವಾಗುತ್ತದೆ ಎಂದಾಗ. ಸ್ವಲ್ಪ ವಾಗ್ವಾದ ನಡೆಯಿತು. ಕೊನೆಗೂ ಎಲ್ಲರೂ ಸೇರಿ ಸ್ಥಳಕ್ಕೆ ತೆರಳಿ ಸರ್ಕಾರಿ ಶಾಲೆ ಹಾಗೂ ಮಹಿಳಾ ಕಾಲೇಜಿಗೆ ಸೂಕ್ತ ಜಗ ಹುಡುಕಲು ಸ್ಥಳ ಪರಿಶೀಲನೆ ಮಾಡಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾರದ ಪೂರ್ಯನಾಯ್ಕ್ ಮಾತನಾಡಿ, ಕಳೆದ ಸಭೆಯಲ್ಲಿ ಬಗರ್ಹುಕುಂ ರೈತರಿಗೆ ಬಲವಂತದ ನೋಟೀಸ್ ನೀಡುವುದಿಲ್ಲ. ನೀಡಿದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿತ್ತು. ಖುದ್ದು ಸಚಿವರೇ ಆದೇಶ ನೀಡಿದ್ದರು. ಆದರೂ ಕೂಡ ಕಳೆದ ೭೦ ವರ್ಷಗಳಿಂದ ಬಗರ್ಹುಕುಂ ಮಾಡಿಕೊಂಡು ಬಂದ ಮತ್ತು ಸರ್ಕಾರವೇ ಹಕ್ಕು ಪತ್ರ ನೀಡಿದ ಸುಮಾರು ಎರಡು ಸಾವಿರ ರೈತರಿಗೆ ನೋಟೀಸ್ ನೀಡಿ ಆತಂಕ ಸೃಷ್ಟಿ ಮಾಡಲಾಗಿದೆ. ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಬೆಲೆ ಇಲ್ಲ. ಅಧಿಕಾರಿಗಳದ್ದೆ ದರ್ಬಾರ್ ಆಗಿದೆ. ಸಾಮೂಹಿಕವಾಗಿ ರೈತರ ಮೇಲೆ ಒತ್ತಡ ತರುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು. ನೋಟೀಸ್ ಹಿಂಪಡೆಯುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿ ಸುಪ್ರೀಂ ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತಿದ್ದೇವೆ. ಕೋರ್ಟ್ ಆದೇಶ ಉಲ್ಲಂಘನೆಯಾಗಬಾರದು ಎಂಬ ಕಾರಣಕ್ಕೆ ಸಾಂಕೇತಿಕವಾಗಿ ನೋಟೀಸ್ ನೀಡುತ್ತಿದ್ದೇವೆ ಅಷ್ಟೇ. ರೈತರಿಗೆ ಯಾವುದೇ ತೊಂದರೆಯಾಗದೇ ನೋಡಿಕೊಳ್ಳುತ್ತೇವೆ. ನಮ್ಮ ಜವಬ್ದಾರಿಯಿದೆ. ಕೆಲವೊಂದು ವಿಚಾರಗಳನ್ನು ಹೇಳಿದರೆ ಅದು ಕಾನೂನು ವಿರುದ್ಧವಾಗುತ್ತದೆ. ರೈತರಿಗೆ ತೊಂದರೆಯಾಗುತ್ತದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದರು.

ಸಚಿವ ಮಧುಬಂಗಾರಪ್ಪ ಮಾತನಾಡಿ, ಸರ್ಕಾರದ ಮಟ್ಟದಲ್ಲೇ ರೈತರಿಗೆ ನೋಟೀಸ್ ನೀಡಿ ಬಲವಂತದಿಂದ ಎಬ್ಬಿಸಬಾರದು ಎಂದು ಸೂಚನೆ ನೀಡಲಾಗಿದೆ. ಆದರೆ ಕೆಲವೊಂದು ನ್ಯಾಯಾಲಯದ ಪ್ರಕರಣಗಳಲ್ಲಿ ಅನಿವಾರ್ಯವಾಗುತ್ತದೆ. ಅದಕ್ಕೂ ಕೂಡ ಸರ್ಕಾರ ರೈತರ ಪರವಾಗಿ ನಿಂತಿದೆ. ಅದನ್ನು ಮೀರಿ ಅನಾವಶ್ಯಕವಾಗಿ ಅಧಿಕಾರಿಗಳು ಸಾಮೂಹಿಕವಾಗಿ ನೋಟೀಸ್ ನೀಡಿದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ. ರೈತರು ಭಯಪಡುವ ಪ್ರಶ್ನೆಯೇ ಇಲ್ಲ. ಸರ್ಕಾರ ನಿಮ್ಮ ಜೊತೆಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಭಾರತೀ ಶೆಟ್ಟಿ, ಬೇಳೂರು ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಗುರುದತ್ತ್ ಹೆಗಡೆ, ಜಿ.ಪಂ. ಸಿಇಓ, ಎಸ್.ಪಿ. ಮಿಥುನ್ಕುಮಾರ್ , ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
