google.com, pub-9939191130407836, DIRECT, f08c47fec0942fa0

ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನವಾಗಿದೆ.

ವರ್ಷದಲ್ಲಿ ಅಭ್ಯಂಗಸ್ನಾನವನ್ನು ಮಾಡುವ ದಿನಗಳು

ಸಂವತ್ಸರಾರಂಭ (ಯುಗಾದಿ)
ವಸಂತೋತ್ಸವವು ಪ್ರಾರಂಭವಾಗುವ ದಿನ ಅಂದರೆ ಫಾಲ್ಗುಣ ಕೃಷ್ಣ ಪ್ರತಿಪದಾ
ದೀಪಾವಳಿಯ ಮೂರು ದಿನಗಳು, ಅಂದರೆ ಆಶ್ವಯುಜ ಕೃಷ್ಣ ಚತುರ್ದಶಿ, ಆಶ್ವಯುಜ ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪ್ರತಿಪದಾ

ಲಾಭಗಳು

ಸ್ನಾನದಿಂದ ರಜ-ತಮ ಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣವು ಹೆಚ್ಚಾಗುತ್ತದೆ; ಇದರ ಪರಿಣಾಮವು ನಿತ್ಯದ ಸ್ನಾನದಿಂದ ಮೂರು ಗಂಟೆ ಉಳಿದರೆ ಅಭ್ಯಂಗಸ್ನಾನದ ಪ್ರಭಾವವು ನಾಲ್ಕರಿಂದ ಐದು ಗಂಟೆ ಉಳಿಯುತ್ತದೆ. ಚರ್ಮಕ್ಕೆ ಯಾವಾಗಲೂ ಸ್ನಿಗ್ಧತೆ ಇರಬೇಕಾಗುತ್ತದೆ, ಆದುದರಿಂದ ಎಣ್ಣೆಯನ್ನು ಹಚ್ಚುತ್ತಾರೆ. ಬಿಸಿನೀರು ಮಂಗಲಕಾರಕ ಮತ್ತು ಶರೀರಕ್ಕೆ ಸುಖದಾಯಕವಾಗಿರುತ್ತದೆ; ಆದುದರಿಂದ ಬಿಸಿನೀರಿನಿಂದ ಸ್ನಾನವನ್ನು ಮಾಡುತ್ತಾರೆ. ಎಣ್ಣೆಯನ್ನು ಹಚ್ಚಿದ ನಂತರ ಸ್ನಾನವನ್ನು ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟೇ ಎಣ್ಣೆಯು ಉಳಿಯುತ್ತದೆ. ಆದುದರಿಂದ ಸ್ನಾನಕ್ಕೆ ಮೊದಲು ಎಣ್ಣೆಯನ್ನು ಹಚ್ಚುವುದು ಆವಶ್ಯಕವಾಗಿದೆ. ಸ್ನಾನದ ನಂತರ ಎಣ್ಣೆಯನ್ನು ಹಚ್ಚುವುದು ಯೋಗ್ಯವಲ್ಲ.

ಅಭ್ಯಂಗಸ್ನಾನದ ಮಹತ್ವ

ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳ ತುಲನೆಯಲ್ಲಿ ಶೇ.೬ರಷ್ಟು ಹೆಚ್ಚು ಸಾತ್ವಿಕತೆಯು ಸಿಗುತ್ತದೆ. ಸುಗಂಧಯುಕ್ತ ಎಣ್ಣೆ ಮತ್ತು ಉಟಣೆಯನ್ನು ಹಚ್ಚಿಕೊಂಡು ಶರೀರಕ್ಕೆ ಮಾಲಿಶ ಮಾಡಿ ಅಭ್ಯಂಗಸ್ನಾನ ಮಾಡುವುದರಿಂದ ವ್ಯಕ್ತಿಯಲ್ಲಿ ಸಾತ್ವಿಕತೆ ಮತ್ತು ತೇಜವು ಹೆಚ್ಚಾಗುತ್ತದೆ. ಉಟಣೆಯನ್ನು ಹಚ್ಚಿಕೊಂಡು ಸ್ನಾನವನ್ನು ಮಾಡುವುದರಿಂದ ಕಫ ಮತ್ತು ಕೊಬ್ಬು ಕಡಿಮೆಯಾಗುವುದು

ಉದ್ವರ್ತನಂ ಕಫಹರಂ ಮೇದಸಃ ಪ್ರವಿಲಾಯನಮ್|
ಸ್ಥಿರೀಕರಣಮಂಗಾನಾಂ ತ್ವಕ್ಪ್ರಸಾದಕರಂ ಪರಮ್||

  • ಅಷ್ಟಾಂಗಹೃದಯ, ಸೂತ್ರಸ್ಥಾನ, ಅಧ್ಯಾಯ 2, ಶ್ಲೋಕ 14

ಅರ್ಥ: ಶರೀರಕ್ಕೆ ಉಟಣೆಯನ್ನು ಹಚ್ಚಿಕೊಳ್ಳುವುದರಿಂದ ಕಫ ಮತ್ತು ಕೊಬ್ಬು ದೂರವಾಗಿ ಶರೀರವು ಸುದೃಢವಾಗುತ್ತದೆ ಮತ್ತು ಚರ್ಮವು ಸ್ವಚ್ಛವಾಗುತ್ತದೆ.
(ಉಟಣೆ ಎಂದರೆ ಆಯುರ್ವೇದೀಯವಾದ ನೈಸರ್ಗಿಕ ಘಟಕಗಳಿಂದ ತಯಾರಿಸಿದ ಚೂರ್ಣ)

ಸುವಾಸನೆ ಎಣ್ಣೆ ಮತ್ತು ಉಟಣೆ ಇವು ಸಾತ್ವಿಕವಾಗಿರುವುದರಿಂದ ಸ್ಥೂಲ ಮತ್ತು ಸೂಕ್ಷ್ಮದೇಹದ ಸುತ್ತಲೂ ಇರುವ ತ್ರಾಸದಾಯಕ ಆವರಣವು ನಾಶವಾಗಿ ಶರೀರವು ಶುದ್ಧ ಮತ್ತು ಸಾತ್ವಿಕವಾಗಲು ಸಹಾಯವಾಗುತ್ತದೆ : ಸುವಾಸನೆ ಎಣ್ಣೆ ಮತ್ತು ಉಟಣೆಗಳನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿರುತ್ತದೆ ಮತ್ತು ಅವು ಸಾತ್ವಿಕವಾಗಿರುತ್ತವೆ. ಅವುಗಳ ಸುವಾಸನೆಯೂ ಸಾತ್ವಿಕವಾಗಿರುತ್ತದೆ. ಅವುಗಳಲ್ಲಿ ವಾಯುಮಂಡಲದಲ್ಲಿನ ಸಾತ್ವಿಕತೆಯನ್ನು ಮತ್ತು ದೇವತೆಗಳ ಲಹರಿಗಳನ್ನು ಗ್ರಹಿಸಿಕೊಳ್ಳುವ ಕ್ಷಮತೆಯಿರುತ್ತದೆ. ಸುವಾಸನೆ ಎಣ್ಣೆ ಅಥವಾ ಉಟಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಶರೀರದಲ್ಲಿನ ರಜ-ತಮ ಲಹರಿಗಳು ಕಡಿಮೆಯಾಗುತ್ತವೆ. ಹಾಗೆಯೇ ಸ್ಥೂಲ ಮತ್ತು ಸೂಕ್ಷ್ಮದೇಹದ ಸುತ್ತಲೂ ಇರುವ ತ್ರಾಸದಾಯಕ ಶಕ್ತಿಯ ಆವರಣವು ನಾಶವಾಗಿ ಶರೀರವು ಶುದ್ಧ ಹಾಗೂ ಸಾತ್ವಿಕವಾಗಲು ಸಹಾಯವಾಗುತ್ತದೆ.

ಶರೀರಕ್ಕೆ ಉಟಣೆ ಹಚ್ಚುವ ಪದ್ಧತಿ

ಉಟಣೆಯು ರಜೋಗುಣ ಮತ್ತು ತೇಜತತ್ತ್ವಕ್ಕೆ ಸಂಬಂಧಿಸಿದೆ. ಶರೀರದ ಮೇಲೆ ದಕ್ಷಿಣಾವರ್ತ ಅಂದರೆ ಗಡಿಯಾರದ ಮುಳ್ಳಿನ ದಿಕ್ಕಿನಂತೆ ಉಟಣೆಯನ್ನು ಹಚ್ಚಿಕೊಳ್ಳಬೇಕು. ಕೈ ಬೆರಳುಗಳ ತುದಿಯು ಶರೀರವನ್ನು ಸ್ಪರ್ಷಿಸುವಂತೆ ಮತ್ತು ಶರೀರದ ಮೇಲೆ ಸ್ವಲ್ಪ ಒತ್ತಡ ಬರುವಂತೆ ನೋಡಬೇಕು. ಹಣೆ: ತರ್ಜನಿ, ಮಧ್ಯಮಾ ಮತ್ತು ಅನಾಮಿಕಾ ಈ ಬೆರಳುಗಳಿಂದ ಹಣೆ ಮೇಲೆ ತಮ್ಮ ಎಡದಿಂದ ಬಲಕ್ಕೆ ಭಸ್ಮದಂತೆ ಉಟಣೆ ಹಚ್ಚಿಕೊಳ್ಳಬೇಕು. ಉಟಣೆ ಹಚ್ಚಿಕೊಳ್ಳುವಾಗ ಬಲದಿಂದ ಎಡಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆರಳುಗಳನ್ನು ತಿರುಗಿಸಬಾರದು.ಹಣೆಯ ಎರಡೂ ಕಡೆಗೆ ಮತ್ತು ಹುಬ್ಬುಗಳ ಹೊರಭಾಗಕ್ಕೆ ಬೆರಳುಗಳ ಅಗ್ರಭಾಗವನ್ನಿಟ್ಟು ಅವುಗಳನ್ನು ಹಿಂದೆ ಮುಂದೆ ಸರಿಸಬೇಕು. ಕಣ್ಣು ರೆಪ್ಪೆ : ಮೂಗಿನಿಂದ ಕಿವಿಯೆಡೆಗೆ ಕೈಯನ್ನು ತಿರುಗಿಸುತ್ತಾ ಕಣ್ಣು ರೆಪ್ಪೆಯ ಮೇಲೆ ಉಟಣೆ ಯನ್ನು ಹಚ್ಚಬೇಕು. ಮೂಗು : ಬಲಗೈಯ ಹೆಬ್ಬೆರಳು ಮತ್ತು ತರ್ಜನಿಯಿಂದ ಮೂಗಿನ ಎರಡೂ ಬದಿಗೆ ಮೇಲಿನಿಂದ ಕೆಳಗೆ ಉಟಣೆಯನ್ನು ಹಚ್ಚಬೇಕು ಮತ್ತು ಅದನ್ನು ಆಘ್ರಾಣಿಸಬೇಕು. ಮುಖದ ನಾಲ್ಕೂ ಬದಿಗೆ : ಮೂಗಿನ ಕೆಳಗಿನಿಂದ ನಮ್ಮ ಬಲಬದಿಗೆ ಗದ್ದದ ತುದಿಯ ವರೆಗೆ ಹಚ್ಚಬೇಕು. ನಂತರ ಗದ್ದದ ತುದಿಯಿಂದ ನಮ್ಮ ಎಡಬದಿಗೆ ಹೋಗಿ ಮುಖದ ಸುತ್ತಲೂ ಗೋಲವನ್ನು ಪೂರ್ಣಗೊಳಿಸಿ ಉಟಣೆ ಹಚ್ಚಿಕೊಳ್ಳಬೇಕು. ಕೆನ್ನೆ : ಎರಡೂ ಕೆನ್ನೆಯ ಮಧ್ಯದಿಂದ ಆರಂಭಿಸಿ ನಮ್ಮ ಬೆರಳುಗಳನ್ನು ಕಣ್ಣು, ಕಿವಿ ಮತ್ತು ಕೊನೆಗೆ ಕೆಳಗಿನ ದಿಕ್ಕಿನಲ್ಲಿ ವರ್ತುಲಾಕಾರದಲ್ಲಿ ತಿರುಗಿಸುತ್ತಾ ಕೆನ್ನೆಯ ಮೇಲೆ ಉಟಣೆಯನ್ನು ಹಚ್ಚಿಕೊಳ್ಳಬೇಕು. ಕಿವಿಯ ಕೆಳ ತುದಿ : ಎರಡೂ ಕಿವಿಯ ಕೆಳ ತುದಿಯ ಮೇಲೆ ಹೆಬ್ಬೆರಳು ಮತ್ತು ತರ್ಜನಿಯಿಂದ ಉಟಣೆಯನ್ನು ಹಚ್ಚಬೇಕು. ಕಿವಿ : ಹೆಬ್ಬೆರಳು ಮತ್ತು ತರ್ಜನಿಯಿಂದ ಎರಡೂ ಕಿವಿಗಳನ್ನು ಹಿಂದಿನಿಂದ ಹಿಡಿದು ಕೆಳಗಿನಿಂದ ಮೇಲಿನ ದಿಕ್ಕಿನತ್ತ ತಿರುಗಿಸಬೇಕು. ಕುತ್ತಿಗೆ : ಕುತ್ತಿಗೆ ಹಿಂದೆ ಮಧ್ಯಭಾಗದಲ್ಲಿ ಬೆರಳುಗಳನ್ನಿಟ್ಟು ಎರಡೂ ಬದಿಯಿಂದ ಮುಂದೆ ಕುತ್ತಿಗೆಯ ಕೆಳ ಭಾಗದ ತನಕ ಎದೆ ಮತ್ತು ಹೊಟ್ಟೆಯ ಮಧ್ಯಭಾಗ : ಎರಡೂ ಕೈಗಳ ಬೆರಳುಗಳನ್ನು ಎದೆಯ ಮಧ್ಯಭಾಗದಲ್ಲಿ ಬರುವಂತೆ ಇಟ್ಟು ಮೇಲಿನಿಂದ ಕೆಳಗೆ ಕೈಯಾಡಿಸಿ ಉಟಣೆಯನ್ನು ಹಚ್ಚಬೇಕು.

ಕಂಕುಳಿಂದ ಸೊಂಟದವರೆಗೆ : ಪಕ್ಕೆಗಳತ್ತ ಮುಂಬದಿಗೆ ಹೆಬ್ಬೆರಳು ಮತ್ತು ಹಿಂಬದಿ ಉಳಿದ ಬೆರಳು ಬರುವಂತೆ ಮೇಲಿನಿಂದ ಕೆಳದಿಕ್ಕಿನತ್ತ ಹಚ್ಚಬೇಕು. ಕೈ-ಕಾಲು: ಕೈಗಳಿಗೆ ಮೇಲಿನಿಂದ ಕೆಳಗೆ ಉಟಣೆ ಹಚ್ಚಬೇಕು. ಅದೇ ರೀತಿ ಕಾಲುಗಳಿಗೆ ಕೈಬೆರಳುಗಳಿಂದ ಮೇಲಿನಿಂದ ಕೆಳಗೆ ಉಟಣೆಯನ್ನು ಹಚ್ಚಬೇಕು. ಕಾಲುಗಳ ಸಂದುಗಳು ಅಂದರೆ ಆಂಕಲ್ಸ್: ಕಾಲು ಮತ್ತು ಕಾಲುಗಳ ಸಂದು ಅಂದರೆ ಂಟಿಞಟe ರಿoಟಿಣ ನ ಮೇಲೆ ಹೆಬ್ಬೆರಳು ಮತ್ತು ತರ್ಜನಿಯಿಂದ ವರ್ತುಲದಂತೆ ತಿಕ್ಕಬೇಕು. ಉಟಣೆಯನ್ನು ಹಚ್ಚಿದ ನಂತರ ಕೊನೆಗೆ ತಲೆಯ ಮಧ್ಯಭಾಗದಲ್ಲಿ ಎಣ್ಣೆಯನ್ನು ಹಾಕಿ ಬಲಗೈಯ ಬೆರಳುಗಳಿಂದ ದಕ್ಷಿಣಾವರ್ತ ಅಂದರೆ ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ತಿರುಗಿಸುತ್ತಾ ಹಚ್ಚಬೇಕು.

ವಿನೋದ ಕಾಮತ್ ರಾಜ್ಯ ವಕ್ತಾರರು, ಸನಾತನ ಸಂಸ್ಥೆ

Leave a Reply

Your email address will not be published. Required fields are marked *