
ಶಿವಮೊಗ್ಗ :- ಸಮಾಜಮುಖಿ ಹಾಗೂ ಮಾನವೀಯ ಮಲ್ಯಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ ದಳ ಸ್ಥಾಪಿಸಲು ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಹಾಗೂ ಜಿಲ್ಲಾ ಮಟ್ಟದ ರ್ಯಾಲಿ ಉದ್ಘಾಟಿಸಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗುತ್ತಾರೆ. ನೀತಿ ಬೋಧನೆ ಮಾಡುವ ಒಂದು ಪಾಠವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಸಮಾಜ ಸೇವೆಗಳಲ್ಲಿ ತೊಡಗಿಸಿ ಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಉತ್ತಮವಾದ ಅವಕಾಶವಿದೆ. ಸ್ಕೌಟ್ಸ್ ಗೈಡ್ಸ್ ಚಳುವಳಿ ಮನೆ ಮನೆಗಳನ್ನು ತಲುಪಬೇಕು ಎಂದು ಹೇಳಿದರು.
ರಾಜ್ಯ ಮುಖ್ಯ ಆಯುಕ್ತ ಪಿ.ಜಿ. ಆರ್. ಸಿಂಧ್ಯಾ ಮಾತನಾಡಿ, ಶತಮಾ ನೋತ್ಸವ ಆಚರಿಸುವ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಶ್ರಮಿಸಿದ ಗಣ್ಯರನ್ನು ನಾವು ನೆನಪು ಮಾಡಿಕೊಳ್ಳಲೇಬೇಕು. ಶಿವಮೊಗ್ಗದ ಜಿಲ್ಲಾ ಸಂಸ್ಥೆ ಶತಮಾ ನೋತ್ಸವ ಹಾಗೂ ಟಿ.ವಿ. ನಾರಾ ಯಣಶಾಸ್ತ್ರಿಗಳ ಜನ್ಮ ಶತಮಾನೋ ತ್ಸವ ಕಾರ್ಯಕ್ರಮ ನಮ್ಮ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಮುಖ್ಯ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಶತಮಾನೋತ್ಸವ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಜಿಲ್ಲೆಯ ಪದಾಧಿಕಾರಿಗಳಿಗೆ ಸಾರ್ವ ಜನಿಕರಿಗೆ ದಾನಿಗಳಿಗೆ ಅಭಿನಂದಿಸಿ ಗೌರವಿಸಿದರು. ಸಂಸ್ಥೆ ಕಟ್ಟಿ ಬೆಳೆಸಲು ಸಹಕರಿಸಿದ ನೂರು ಜನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್. ರುದ್ರೇಗೌಡ, ಎಂಎಲ್ಸಿ ಬಲ್ಕಿಶ್ ಬಾನು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಡಿಸಿ ಅಭಿಷೇಕ್, ಭಾರತಿ ಚಂದ್ರಶೇಖರ, ರಾಜ್ಯ ಉಪಾಧ್ಯಕ್ಷ ಮಹೇಶ್, ಆಯುಕ್ತ ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯಕುಮಾರ್, ಚೂಡಾಮಣಿ ಪವಾರ್, ಎಸ್.ಜಿ. ಆನಂದ್ ಇತರರಿದ್ದರು.
