
ಶಿವಮೊಗ್ಗ :- ಧರ್ಮವೇ ಶ್ರೇಷ್ಠ, ಅಜ್ಞಾನವನ್ನು ನಾಶ ಮಾಡುವುದೇ ಧರ್ಮ ಎಂದು ಶಿರಸಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಹೇಳಿದರು.
ಅವರು ನಿನ್ನೆ ಶಿವಮೊಗ್ಗ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯವೃಂದ ಇವರ ವತಿಯಿಂದ ದೈವಜ್ಞ ಕಲ್ಯಾಣಮಂದಿರದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಧರ್ಮವೆಂದರೆ ಕೇವಲ ವ್ಯಕ್ತಿಯಲ್ಲ, ಅದೊಂದು ಶಕ್ತಿ ಮತ್ತು ಭಕ್ತಿ. ಅದು ವ್ಯಕ್ತಿಯ ಜೊತೆಗೆ ಆತನ ಕುಟುಂಬ ಮತ್ತು ಸಮಾಜ ಹಾಗೂ ಮಾನವ ಕುಲಕ್ಕೆ ಸೇರಿದ್ದು. ಧರ್ಮದ ಬೀಜ ಬಿತ್ತಿದರೆ ಅದರ ಫಲ ಒಬ್ಬರು ಪಡೆಯುವುದಿಲ್ಲ. ಅದು ಎಲ್ಲರಿಗೂ ಸಲ್ಲುತ್ತದೆ. ಹಾಗಾಗಿ ಮನುಷ್ಯ ಧರ್ಮಕ್ಕೆ ನಿಷ್ಠನಾಗಿರಬೇಕು ಎಂದರು.
ದೈವಜ್ಞ ಸಮಾಜದವರು ಸಂಘಟಿತರಾಗಬೇಕು. ಶಿವಮೊಗ್ಗದ ದೈವಜ್ಞ ಸಮಾಜಕ್ಕೂ ಶ್ರೀ ಸೋದೆ ವಾದಿರಾಜ ಮಠಕ್ಕೂ ಅವಿನಾಭಾವ ಸಂಬಂಧವಿದೆ. ದೈವಜ್ಞ ಸಮಾಜದವರು ಬಗೆ ಬಗೆಯ, ಬಣ್ಣ ಬಣ್ಣದ, ಸುಹಾಸನೆಯ ಹೂಗಳಿದ್ದಂತೆ. ಅವರೆಲ್ಲರೂ ಒಂದು ಹಾರವಾಗಿ ಒಂದೇ ಮಾಲೆಯ ಪುಷ್ಪಗಳು ಕಂಗೊಳಿಸುವಂತೆ ಒಟ್ಟಾಗಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗ ದೈವಜ್ಞ ಸಮಾಜದವರ ಬಗ್ಗೆ ಹೆಮ್ಮೆ ಇದೆ ಎಂದರು.
ಯುವ ಪೀಳಿಗೆ ಭಾರತೀಯ ಸನಾತನ ಧರ್ಮ, ಸಂಸ್ಕಾರಗಳನ್ನು ಉಳಿಸಿಕೊಳ್ಳಬೇಕು. ಭಕ್ತಿಯ ಜೊತೆಗೆ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಧಾರ್ಮಿಕ ಶಿಕ್ಷಣದ ಜೊತೆ ಜೊತೆಗೆ ವೈಜನಿಕ ಶಿಕ್ಷಣವೂ ನಮಗೆ ಬೇಕು. ಅದು ನೈತಿಕ ಮಲ್ಯಗಳಿಂದ ಕೂಡಿರಬೇಕು. ಭಕ್ತಿ, ಶ್ರದ್ಧೆ ಇರಬೇಕು. ಪುರಾಣದ ಕತೆಗಳು ಮತ್ತು ದೃಷ್ಟಾಂತಗಳನ್ನು ವಿವರಿಸುವ ಮೂಲಕ ಸಜ್ಜನರ ಸಂಗ ಮಾಡಿ ವೈಷ್ಣವ ಧರ್ಮವನ್ನು ಕಾಪಾಡಿ ಎಂದು ಕರೆ ನೀಡಿದರು.
ಶಿವಮೊಗ್ಗದಲ್ಲಿ ನಡೆದ ದೈವಜ್ಞ ಸಮಾಜದ ಜತ್ರೆ
ಶಿವಮೊಗ್ಗದಲ್ಲಿ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯವೃಂದದವರು ಆಯೋಜಿಸಿದ್ದ ಎರಡು ದಿನದ ಧಾರ್ಮಿಕ ಕಾರ್ಯಕ್ರಮಗಳು ದೈವಜ್ಞ ಸಮಾಜದ ಜತ್ರೆ ಎಂದು ಶ್ರೀಗಳು ಬಣ್ಣಿಸಿದರು. ಜ. ೧೦ರಂದು ಸಂಜೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ರಾಘವೇಂದ್ರಸ್ವಾಮಿ ಮಠದವರೆಗೆ ಪೂರ್ಣಕುಂಭ, ಚಂಡೆ ವಾದ್ಯಗಳೊಂದಿಗೆ ಶ್ರೀಗುರುಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ರಾಯರ ಮಠದಲ್ಲಿ ಭೂತರಾಯನ ಪೂಜೆ ಅತ್ಯಂತ ಶ್ರದ್ಧಾ ಮತ್ತು ಭಕ್ತಿಯಿಂದ ನಡೆಯಿತು.
ಜ. ೧೧ರಂದು ಬೆಳಗ್ಗೆ ಶ್ರೀಗಳಿಂದ ಸಂಸ್ಥಾನ ಪೂಜೆ ನಡೆಯಿತು. ನಂತರ ದೈವಜ್ಞ ಕಲ್ಯಾಣ ಮಂದಿರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಂದ ಸಾಮೂಹಿಕ ಪಾದಪೂಜೆ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆದವು. ಗುರುಗಳ ಆಶಿರ್ವಾದದೊಂದಿಗೆ ಎರಡು ದಿನಗಳ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಎರಡೂ ದಿನದ ಕಾರ್ಯಕ್ರಮದಲ್ಲೂ ಶ್ರಿ ವಾದಿರಾಜ ಶಿಷ್ಯವೃಂದದ ಪ್ರಮಖರುಗಳಾದ, ಸತೀಶ್ ಹಯಗ್ರೀವ್, ಸತೀಶ್ ಮಲ್ಡಿಂಗ್, ನಾಗರಾಜ್ ಸುಬ್ರಾಯ್ ಶೇಟ್, ರಾಜೇಶ್ ಸುಬ್ರಾಯ್ ಶೇಟ್,, ಪ್ರದೀಪ್, ಸತೀಶ್ ವೈಭವ್, ಮಂಜುನಾಥ್, ಓಂ ಗಣೇಶ್ ಶೇಟ್, ರಾಯ್ಕರ್, ಆರ್. ಸತೀಶ್, ರಾಘವೇಂದ್ರ ಶೇಟ್, ಸುಹಾಸ್, ನಾಗರಾಜ್, ಸುಹಾಸ್ ಶೇಟ್, ಗಣೇಶ್ ಸೇರಿದಂತೆ ಹಲವರಿದ್ದರು.