
ಶಿವಮೊಗ್ಗ :- ಯುವಕರ ಭವಿಷ್ಯ ಸುರಕ್ಷಿತವಾಗಲಿ ಹಾಗೂ ಸಮಾಜ ಮಾದಕ ವಸ್ತುಗಳ ದುಷ್ಪರಿಣಾಮಗಳಿಂದ ದೂರವಾಗಲಿ ಎಂಬ ಮಹದ್ದೋದ್ದೇಶದೊಂದಿಗೆ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ನಶೆ ಮುಕ್ತ ಶಿವಮೊಗ್ಗ ಜನಜಾಗೃತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಶ ಮುಕ್ತ ಶಿವಮೊಗ್ಗ ಅಭಿಯಾನದ ಸಂಚಾಲಕರಾದ ರೋಟರಿ ಮಿಡ್ಟೌನ್, ಶಿವಮೊಗ್ಗದ ಅಧ್ಯಕ್ಷ ಹರ್ಷ ಭಾಸ್ಕರ್ ಕಾಮತ್ ತಿಳಿಸಿದ್ದಾರೆ.
ಈ ಜನಜಗೃತಿ ರಥಯಾತ್ರೆಯು ಜ. ೬ರ ಮಂಗಳವಾರ ಬೆಳಿಗ್ಗೆ ೧೧.೩೦ಕ್ಕೆ ಜಿಲ್ಲಾಧಿಕಾರಿಗಳ ಕಛೆರಿಯಿಂದ ಶಿವಮೊಗ್ಗ ನಗರದಿಂದ ದರ್ಶನ ಯಾತ್ರೆಗೆ ಹೊರಡಲಿದೆ. ರಥಯಾತ್ರೆಯ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕೌಟಲಗಿ ನೆರವೇರಿಸಲಿದ್ದಾರೆ. ಈ ಮಹತ್ವದ ಅಭಿಯಾನವನ್ನು ಪರಿವರ್ತನಾ ಟ್ರಸ್ಟ್ ಹಾಗೂ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ರಥಯಾತ್ರೆಯಲ್ಲಿ ಗಣ್ಯರು, ವಿವಿಧ ಸಂಘಸಂಸ್ಥೆಗಳು, ರೋಟರಿ ಕ್ಲಬ್ಗಳು, ಜೆಸಿ, ಶಾಲಾಕಾಲೇಜುಗಳು, ಪೊಲೀಸ್ ಅಧಿಕಾರಿಗಳು ಹಾಗೂ ಯುವಜನತೆ ಭಾಗವಹಿಸಿ ಸಮಾಜದಲ್ಲಿ ನಶೆ ವಿರೋಧಿ ಬಲವಾದ ಸಂದೇಶವನ್ನು ಹರಡಲಿದ್ದಾರೆ ಎಂದರು.
ರಥಯಾತ್ರೆಯ ವಿದ್ಯುತ್ ಚಾಲನೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯುವಕರ ಭವಿಷ್ಯ ರಕ್ಷಣೆಯ ಈ ಮಹತ್ತರ ಅಭಿಯಾನಕ್ಕೆ ಕೈಜೋಡಿಸಬೇಕೆಂದು ಹರ್ಷ ಭಾಸ್ಕರ್ ಕಾಮತ್ ಅವರು ವಿನಮ್ರವಾಗಿ ಮನವಿ ಮಾಡಿದ್ದಾರೆ.