ಶಿವಮೊಗ್ಗ :- ಇಲ್ಲಿನ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ವಸತಿ ವಿದ್ಯಾಲಯದಲ್ಲಿ ಜ. 1ರ ಹೊಸವರುಷದ ಹೊಸದಿನದಂದು ಜನ್ಮದಾತರಿಗೆ ಪಾದಪೂಜೆ, ಮಕ್ಕಳಿಂದ ರಂಗೋತ್ಸವ ಹಾಗೂ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗುತ್ತದೆ ಎಂದು ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಶೋಭಾ ಆರ್. ವೆಂಕಟರಮಣ ತಿಳಿಸಿದ್ದಾರೆ.
ಈಗ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ೧೯ವರುಷದಿಂದ ಜನ್ಮದಾತರಿಗೆ ಪಾದಪೂಜೆಯನ್ನು ಹಮ್ಮಿಕೊಂಡಿದ್ದು, ಜ. 1ರ ಗುರುವಾರ ಬೆಳಗ್ಗೆ 8 ಗಂಟೆಗೆ ಸತ್ಯನಾರಾಯಣ ಪೂಜೆ ನಡೆಯಲಿದ್ದು, 10 ಗಂಟೆಗೆ ನಡೆಯಲಿರುವ ಪಾದಪೂಜೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ವಹಿಸಲಿದ್ದಾರೆ.
ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿ ಪಾದಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಾಲೆಯ ಹಿರಿಯ ಸಾಧಕ ವಿದ್ಯಾರ್ಥಿ ಪ್ರಸ್ತುತ ಭಾರತೀಯ ವಿಜನ ಸಂಸ್ಥೆ ಬೆಂಗಳೂರಿನ ಆಡಳಿತ ಸಹಾಯಕರು ಹಣಕಾಸು ಮತ್ತು ಲೆಕ್ಕಪತ್ರ ವಿಭಾಗದ ಅಧಿಕಾರಿಯೂ ಆದ ಸಿ.ಎಸ್. ಆಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ವಿದ್ಯಾನಿಕೇತನದ ಅಧ್ಯಕ್ಷ ಡಾ.ಡಿ.ಆರ್. ನಾಗೇಶ್ ವಹಿಸಲಿದ್ದಾರೆ. ಪ್ರಾಸ್ತಾವಿಕವಾಗಿ ಸದಸ್ಯ ಡಿ.ಎಂ. ದೇವರಾಜ್ ಮಾತನಾಡ ಲಿದ್ದಾರೆ. ಕಾರ್ಯಕ್ರಮದಲ್ಲಿ ಕೋ-ಆರ್ಡಿನೇಟರ್‌ಗಳಾದ ಕೆ.ಹೆಚ್.ಅರುಣ್ ಹಾಗೂ ಕೆ.ಡಿ. ಶರತ್‌ಕುಮಾರ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ನಿತ್ಯ ಎಂ. ಕುಲಕರ್ಣಿ ಸೇರಿದಂತೆ ವಿವಿಧ ಸಾಧಕ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಗುತ್ತದೆ. ಕ್ರೀಡೆಗಳಲ್ಲಿ ವಿವಿಧ ರಾಜ್ಯ, ಅಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.