ಶಿವಮೊಗ್ಗ :- ಇಲ್ಲಿಗೆ ಸಮೀಪದ ಆಯನೂರು ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಸ್ತ್ರೀಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.
ಆಯನೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನದ ನಂತರ ಮತ್ತು ರಾತ್ರಿವೇಳೆಯಲ್ಲಿ ವೈದ್ಯಾಧಿಕಾರಿಗಳು ಲಭ್ಯವಿಲ್ಲದ ಕಾರಣ ಗರ್ಭಿಣಿ, ಬಾಣಂತಿಯರು, ವಯೋವೃದ್ಧರು ಆರೋಗ್ಯಸೇವೆಗಾಗಿ ನಗರ ಪ್ರದೇಶಗಳಿಗೆ ತೆರಳುತ್ತಿದ್ದು, ತುರ್ತು ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಇಲ್ಲದ ಕಾರಣ ಸಕಾಲಕ್ಕೆ ಸೇವೆ ದೊರಕದೆ ಪ್ರಾಣಹಾನಿಯಾಗುವ ಸಂಭವವಿರುತ್ತದೆ. ಹೆಚ್ಚಿನ ಸೌಕರ್ಯ ಈ ಆರೋಗ್ಯಕೇಂದ್ರದಲ್ಲಿ ಇಲ್ಲದ್ದರಿಂದ ರೋಗಿಗಳಿಗೆ ಬೇರೆ ಆಸ್ಪತ್ರೆಗಳಿಗೆ ತೆರಳುವಂತೆ ಸೂಚಿಸುತ್ತಾರೆ.
ಈ ಕೇಂದ್ರದಲ್ಲಿ ಒಬ್ಬನೇ ವೈದ್ಯಾಧಿಕಾರಿ ಇದ್ದು ಸೂಕ್ತ ಸೇವೆಗಳು ದೊರಕುತ್ತಿಲ್ಲ. ಮಹಿಳೆಯರಿಗಾಗಿ ಹೆಚ್ಚುವರಿ ವೈದ್ಯಾಧಿಕಾರಿಗಳನ್ನು ನೇಮಿಸಬೇಕು. ರಾತ್ರಿವೇಳೆಯಲ್ಲಿ ನವಜತ ಶಿಶುಗಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ವೈದ್ಯಾಧಿಕಾರಿಗಳ ಸೇವೆ ಲಭ್ಯವಿಲ್ಲದ ಕಾರಣ ಕಾಯಿಲೆಗಳು ಉಲ್ಭಣಗೊಳ್ಳುತ್ತಿದೆ. ಅಲ್ಲದೆ ವಿವಿಧ ತಪಾಸಣೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಪಾರ ಹಣ ವಿನಿಯೋಗವಾಗುತ್ತಿದೆ. ಸಣ್ಣ-ಪುಣ್ಣ ಆರೋಗ್ಯ ಸಮಸ್ಯೆಗಳಿಗೂ ಜಿಲ್ಲಾಸ್ಪತ್ರೆಗೆ ತೆರಳುವಂತೆ ಸೂಚಿಸುತ್ತಿದ್ದು, ತರಬೇತಿ ಪಡೆಯುತ್ತಿರುವ ಮೆಡಿಕಲ್ ವಿದ್ಯಾರ್ಥಿಗಳು ತಪಾಸಣೆ ನಡೆಸುತ್ತಿರುವುದರಿಂದ ಸಾರ್ವಜನಿಕರು ಆಸ್ಪತ್ರೆಯ ಸೌಲಭ್ಯ ಪಡೆಯಲು ಹಿಂಜರಿಯುತ್ತಿದ್ದಾರೆ. ಸಹಜ ಪ್ರಸೂತಿ ಆಗುತ್ತಿದ್ದರೂ ಕೂಡ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡುತ್ತಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳಿಗೆ ನಿರ್ಲಕ್ಷ್ಯತೋರಿ ಸಕಾಲಕ್ಕೆ ಸೇವೆ ನೀಡುತ್ತಿಲ್ಲ. ಈ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಕೂಲಿಕಾರ್ಮಿಕರು, ಅತೀ ಸಣ್ಣ ರೈತರು, ವಯೋವೃದ್ಧರು ಹೆಚ್ಚಾಗಿ ಇರುವುದರಿಂದ ಈ ಎಲ್ಲಾ ಗಂಭೀರವಾದ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲು ಸೂಕ್ತಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಗಿದೆ.
ಮನವಿ ಸಂದರ್ಭದಲ್ಲಿ ಪ್ರಮುಖರಾದ ಸುವರ್ಣ, ವಿದ್ಯಾ, ಕಾವೇರಿ, ಸರೋಜ, ರಾಧಮ್ಮ, ಕಸ್ತೂರಮ್ಮ, ಇಂದ್ರಮ್ಮ, ಚೈತ್ರ, ಶಿಲ್ಪ, ಯಶೋಧ, ಶ್ವೇತ ಮೊದಲಾದವರಿದ್ದರು.