ನವದೆಹಲಿ :- ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಕಾಟ ಹಾಗೂ ಬಿಡಾಡಿ ದನಗಳ ಹಾವಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಕ್ರೀಡಾಂಗಣಗಳು ಹಾಗೂ ರೈಲ್ವೆ ನಿಲ್ದಾಣಗಳಿಂದ ಬೀದಿ ನಾಯಿಗಳನ್ನ ಸ್ಥಳಾಂತರಿಸುವಂತೆ ಸೂಚನೆ ನೀಡಿದೆ. ಜೊತೆಗೆ ಹೆದ್ದಾರಿಗಳನ್ನ ಬಿಡಾಡಿ ದನಗಳಿಂದ ಮುಕ್ತಗೊಳಿಸು ವಂತೆಯೂ ತಾಕೀತು ಮಾಡಿದೆ.
ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಸಂದೀಪ್ ಮೆಹ್ತಾ ಮತ್ತು ಎನ್ವಿ ಅಂಜಾರಿಯಾ ಅವರ ಪೀಠವು ಇಂದು ರಸ್ತೆಗಳಿಂದ ಬಿಡಾಡಿ ದನಗಳು ಹಾಗೂ ನಾಯಿಗಳನ್ನು ತೆರವುಗೊಳಿಸಬೇಕೆಂಬ ರಾಜಸ್ಥಾನ ಹೈಕೋರ್ಟ್ ನಿರ್ದೇಶನಗಳನ್ನ ಪುನರುಚ್ಚರಿಸಿದೆ. ಆ ಆದೇಶವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಹೆದ್ದಾರಿಗಳು ಮತ್ತು ಇತರ ಎಕ್ಸ್ಪ್ರೆಸ್ ವೇಗಳಲ್ಲಿ ಬಿಡಾಡಿ ದನಗಳು, ನಾಯಿಗಳನ್ನ ಹಿಡಿಯಲು ಹೈವೆ ಪ್ಯಾಟ್ರೋಲ್ ತಂಡ (ಗಸ್ತು ತಂಡ) ರಚಿಸಬೇಕು. ಬಿಡಾಡಿ ಪ್ರಾಣಿಗಳ ಬಗ್ಗೆ ದೂರು ನೀಡಲು ಸಹಾಯವಾಣಿ ಸಂಖ್ಯೆ ಆರಂಭಿಸಬೇಕೆಂದು ಸೂಚಿಸಿದೆ.
ವಿಶೇಷವಾಗಿ ಬೀದಿ ನಾಯಿಗಳ ಕಾಟ ತಡೆಯಲು ಮತ್ತು ಕಡಿತವನ್ನ ತಡೆಗಟ್ಟಲು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕಾಲೇಜುಗಳಿಗೆ ಬೇಲಿ ಹಾಕಬೇಕು. ಬೇಲಿ ಅಗತ್ಯವಿರುವ ಎಲ್ಲ ಸಂಸ್ಥೆಗಳನ್ನು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ೨ ವಾರಗಳ ಅವಧಿಯಲ್ಲಿ ಗುರುತಿಸಬೇಕು ಎಂದು ನಿರ್ದೇಶಿಸಿದೆ.