
ಶಿವಮೊಗ್ಗ :- ನಗರದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾದ ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ಕಾಮಗಾರಿಯ ಪ್ರಗತಿಯ ಕುರಿತು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾನ್ಯ ಲೋಕೋಪಯೋಗಿ ಸಚಿವರ ಬಳಿ ವಿಶೇಷ ಪ್ರಯತ್ನದ ಸಲುವಾಗಿ ಹಲವು ದಿನಗಳಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಅಪಾಯಕಾರಿಯಾಗಿದ್ದ ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿಯ ರಸ್ತೆಯ ನೂತನ ರಸ್ತೆಯ ಕಾಮಗಾರಿಯು ಪ್ರಾರಂಭವಾಗಿದ್ದು, ಇಂದು PWD ಅಧಿಕಾರಿಗಳು, ಸಂಚಾರಿ ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಬಿಜೆಪಿ ಪ್ರಮುಖರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿ ಹಾಗೆಯೇ ಹೊನ್ನಾಳಿ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿಯೇ ಪ್ರಾರಂಭಿಸಲು ತಿಳಿಸಿದರು.

ಒಟ್ಟು 3 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ರಸ್ತೆ ಕಾಮಗಾರಿಯಲ್ಲಿ 2 ಕೋಟಿ ರೂ ವೆಚ್ಚದ ಕಾಂಕ್ರೀಟ್ ರಸ್ತೆ, 1 ಕೋಟಿ ರೂ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆಯ ಕಾಮಗಾರಿ ಪೂರ್ಣಗೊಂಡ ನಂತರ ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಭೇಟಿಯ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟ, ವಾಹನಗಳ ಸುಗಮ ಸಂಚಾರ, ಸಂಚಾರ ವ್ಯತ್ಯಯ ಮತ್ತು ನಾಗರಿಕರಿಗೆ ಉಂಟಾಗುತ್ತಿರುವ ತಾತ್ಕಾಲಿಕ ಅಸೌಕರ್ಯಗಳ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಕೆಲಸವನ್ನು ನಿಗದಿತ ಅವಧಿಯಲ್ಲಿ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.