
ಶಿವಮೊಗ್ಗ :- ನಗರದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಗಳ ಸಮೂಹ ಸಂಸ್ಥೆಗಳ ಗೌರವ ಅಧ್ಯಕ್ಷ ಅನೂಪ್ ಎನ್. ಪಟೇಲ್ ಅವರಿಗೆ ಸಮೂಹ ಶಾಲೆಗಳ ಸಿಬ್ಬಂದಿವರ್ಗದವರಿಂದ ಅ. 18ರಂದು ಬೆಳಿಗ್ಗೆ 10.30ಕ್ಕೆ ರಾಯಲ್ ಆರ್ಕೆಡ್ನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಬ್ಬಂದಿಗಳ ಪರವಾಗಿ ಶಾಲೆಯ ಮುಖ್ಯೋಪಧ್ಯಾಯಿನಿ ರೂಪಶ್ರೀ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಂಸ್ಥೆಯ ಗೌರವ ಅಧ್ಯಕ್ಷರಾದ ಅನೂಪ್ ಎನ್. ಪಟೇಲ್ ಅವರಿಗೆ ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ದಿನಪತ್ರಿಕೆಗಳ ಪ್ರತಿಷ್ಠಿತ ಎಕ್ಸಲೆನ್ಸ್ ಮತ್ತು ಹಾನರ್ ಪ್ರಶಸ್ತಿ ದೊರಕಿದೆ. ಇದೊಂದು ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಕೆಲಸ ಮಾಡಿದ್ದಕ್ಕಾಗಿ ನೀಡಲಾಗುತ್ತಿದೆ. ನಮ್ಮ ಸಂಸ್ಥೆಯ ಗೌರವ ಅಧ್ಯಕ್ಷರಿಗೆ ಈ ಪ್ರಶಸ್ತಿ ಬಂದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಸಿಬ್ಬಂದಿವರ್ಗದವರಿಂದ ಇವರನ್ನು ಗೌರವಿಸಲಾಗುವುದು ಎಂದರು.
ಅ.೧೮ರ ಅಭಿನಂದನಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾಜಿ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ಡಾ|| ಧನಂಜಯಸರ್ಜಿ, ಶಾರದಾ ಪೂರ್ಯಾನಾಯ್ಕ್, ಡಿ.ಎಸ್. ಅರುಣ್, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಡಿಎಸ್ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಪತ್ರಿಕಾ ಸಂಪಾದಕರುಗಳಾದ ನಮ್ಮನಾಡು ಕೆ.ವಿ. ಶಿವಕುಮಾರ್, ಟೈಮ್ಸ್ ಚಂದ್ರಕಾಂತ್, ಕ್ರಾಂತಿದೀಪ ಎನ್. ಮಂಜುನಾಥ್ ಮುಂತಾದವರು ಭಾಗವಹಿಸುವರು ಎಂದರು.

ವಿವೇಕಾನಂದ ಫೌಂಡೇಷನ್ ಅಸ್ಥಿತ್ವಕ್ಕ
ಶಿಕ್ಷಣ ಸಂಸ್ಥೆಯಲ್ಲಿನ ಉತ್ತಮ ಕಾರ್ಯಕ್ಕಾಗಿ ನನಗೆ ಈ ಪ್ರಶಸ್ತಿ ಸಿಕ್ಕಿದೆ. ಸಿಬ್ಬಂದಿ ವರ್ಗದವರು ಅಭಿನಂದಿಸುತ್ತಿರುವುದಕ್ಕೆ ಕೃತಜ್ಞತೆ ನೀಡುತ್ತೇನೆ. ಆದರೆ ಇದರ ಜೊತೆಗೆಯೇ ನಮ್ಮ ಸಮೂಹ ಸಂಸ್ಥೆಗಳ ಶೈಕ್ಷಣಿಕ ಪ್ರಗತಿಗಾಗಿ ವಿವೇಕಾನಂದ ಫೌಂಡೇಷನ್ ಕೂಡ ಅಸ್ಥಿತ್ವಕ್ಕೆ ಬರಲಿದ್ದು, ಸಂಸ್ಥಾಪನಾ ಕಾರ್ಯಕ್ರಮ ಕೂಡ ಉದ್ಘಾಟನೆಯಾಗಲಿದೆ. ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಎಲ್ಲಾ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ಸಮೂಹ ಸಂಸ್ಥೆಗಳ ಗೌರವ ಅಧ್ಯಕ್ಷ ಹಾಗೂ ಪ್ರಶಸ್ತಿ ವಿಜೇತ ಅನೂಪ್ ಎನ್. ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿವೇಕಾನಂದ ಫೌಂಡೇಷನ್ ಸ್ಥಾಪಿಸುವ ಉದ್ದೇಶವೆಂದರೆ ಬಡವಿದ್ಯಾರ್ಥಿಗಳನ್ನು ಪ್ರೋ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವುದು, ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಉತ್ತಮ ಆರೋಗ್ಯ ನೀಡುವುದು, ನಮ್ಮ ತಾಯಿ ಪದ್ಮನಾರಾಯಣಸ್ವಾಮಿ ಅವರ ಹೆಸರಿನಲ್ಲಿ ಸ್ಕಾಲರ್ಶಿಪ್ ನಿಧಿಯೊಂದನ್ನು ಸ್ಥಾಪಿಸಲಾಗುತ್ತದೆ. ಈ ಹಣವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ಶಿಪ್ ರೂಪದಲ್ಲಿ ನೀಡಲಾಗುವುದು ಮತ್ತು ಪ್ರತಿವರ್ಷ ಐದು ಮಕ್ಕಳನ್ನು ಆರಿಸಿ ಅವರ ಎಲ್ಕೆಜಿ ಯಿಂದ ಎಸ್ಎಸ್ಎಲ್ಸಿಯವರೆಗೆ ಉಚಿತ ಶಿಕ್ಷಣ ನೀಡುವುದು ಮತ್ತು ಬೇರೆ ಬೇರೆ ಸಂಸ್ಥೆಗಳಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅದಕ್ಕಾಗಿ ಒಂದು ಪರೀಕ್ಷೆ ನಡೆಸಿ, ಅದರಲ್ಲಿ ಉತ್ತೀರ್ಣರಾದವರಿಗೆ ಸ್ಕಾಲರ್ಶಿಪ್ ನೀಡುವ ಮತ್ತು ಶುಲ್ಕದಲ್ಲಿ ಶೇ.೫೦ರಷ್ಟು ರಿಯಾಯಿತಿ ನೀಡುವ ಯೋಜನೆಯನ್ನು ಕೂಡ ಫೌಂಡೇಷನ್ ಹೊಂದಿದೆ ಎಂದರು.
ವಿವೇಕಾನಂದ ಸಮೂಹ ಸಂಸ್ಥೆಯು ನಾಲ್ಕು ಪ್ರಮುಖ ಶಾಲೆಗಳನ್ನು ಹೊಂದಿದ್ದು, ಎಲ್ಲವೂ ಆಂಗ್ಲಮಾಧ್ಯಮದಲ್ಲಿ ಇವೆ. ಸುಮಾರು ೨೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 150ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಶಿರಸಿಯಲ್ಲೂ ಕೂಡ ನಮ್ಮ ಬ್ರಾಂಚ್ ಇದೆ. ಒಟ್ಟಾರೆ ಶೈಕ್ಷಣಿಕ ರಂಗದಲ್ಲಿ ಒಂದು ಹೊಸ ಕ್ರಾಂತಿಯನ್ನು ಮಾಡುವ ಮೂಲಕ ಸೇವೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಮುಂದಿನ ದಿನಗಳಲ್ಲಿ ಸಿಬಿಎಸ್ಇ ಶಾಲೆಗಳನ್ನು ಕೂಡ ತೆರೆಯಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ರಾಗಿನಿ ಸಿಂಗ್, ಶಿಕ್ಷಕಿ ಲಕ್ಷ್ಮೀದೇವಿ, ಶ್ರೀದೇವಿ ಇದ್ದರು.