
ಶಿವಮೊಗ್ಗ :- ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಸರ್ಕಾರದ ಆರ್ಥಿಕ ಇಲಾಖೆ ವತಿಯಿಂದಲೇ ವೇತನ ನೀಡಬೇಕು ಎಂದು ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದ ಹೇಳಿದರು.

ಅವರು ಇಂದು ಮಹಾನಗರ ಪಾಲಿಕೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆ ಸೇರಿದಂತೆ ಪುರಸಭೆ, ನಗರಸಭೆ, ಪಪಂ ನೌಕರರಿಗೆ ಎಸ್.ಎಫ್.ಸಿ. ವೇತನ ನಿಧಿಯಲ್ಲಿ ಶೇ. 20ರಿಂದ ಶೇ. 15ರವರೆಗೆ ಅನುದಾನ ಕಡಿತ ಮಾಡಲಾಗಿದೆ. ವ್ಯತ್ಯಾಸದ ಮೊತ್ತವನ್ನು ಸ್ಥಳೀಯ ಸಂಸ್ಥೆಗಳ ನಿಧಿಯಿಂದಲೇ ಬಳಸಿ ವೇತನ ಪಾವತಿಸುವಂತೆ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದೆ. ಆದರೆ ಇದು ಸರಿಯಲ್ಲ, ಜನರ ತೆರಿಗೆ ಹಣವನ್ನು ಅಭಿವೃದ್ಧಿಗೆ ಮಾತ್ರ ಬಳಸಬೇಕಾಗುತ್ತದೆ. ಆ ಹಣವನ್ನು ವೇತನ ಎಂದು ಪರಿಗಣಿಸುವುದು ಸರಿಯಲ್ಲ ಆದ್ದರಿಂದ ಈಗಿರುವ ಸರ್ಕಾರದ ಆರ್ಥಿಕ ಇಲಾಖೆಯ ಅನುದಾನದಲ್ಲಿಯೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
7ನೇ ವೇತನ ಆಯೋಗದ ಸೌಲಭ್ಯವನ್ನು ಸ್ಥಳೀಯ ಸಂಸ್ಥೆಯ ನೌಕರರಿಗೂ ಕೂಡ ಆರ್ಥಿಕ ಇಲಾಖೆಯಿಂದಲೇ ಪಾವತಿಸಲು ಅನುದಾನ ಬಿಡುಗಡೆಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕೇಂದ್ರ ಕಚೇರಿಯ ಆದೇಶದಂತೆ ಶಿವಮೊಗ್ಗ ಮಹಾನಗರ ಪಾಲಿಕೆಯೂ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ನೌಕರರು ಇಂದಿನಿಂದ ಹಂತಹಂತವಾಗಿ ಹೋರಾಟವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಮೇ ೨೫ರ ಒಳಗೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಮೇ 26ರಿಂದ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಅಂದು ಸಾಂದರ್ಭಿಕ ರಜೆಹಾಕಿ ಹೋರಾಟವನ್ನು ಆರಂಭಿಸುತ್ತೇವೆ. ಎಲ್ಲಾ ಕೆಲಸಗಳನ್ನು ನಿಲ್ಲಿಸುತ್ತೇವೆ. ಇಲ್ಲಿಯವರೆಗೆ ಅವಕಾಶ ಕೊಡದೇ ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು. ಪತ್ರಿಕಾಗೋಷ್ಟಿಯಲ್ಲಿ ಪದಾಧಿಕಾರಿಗಳು ಹಾಜರಿದ್ದರು.