Flowers in Chania

ಈಡಿಗ ಬಿಲ್ಲವ ನಾಮಧಾರಿ ದೀವರು ಜನಾಂಗಕ್ಕೆ ಪ್ರಾಚೀನ ಇತಿಹಾಸವಿದೆ : ಯಡಿಯೂರಪ್ಪ

ಸಾಗರ :- ಈಡಿಗ ಬಿಲ್ಲವ ನಾಮಧಾರಿ ದೀವರು ಜನಾಂಗಕ್ಕೆ ಪ್ರಾಚೀನ ಇತಿಹಾಸವಿದೆ. ಕರಾವಳಿ ಭಾಗದಲ್ಲಿ ಕಡಲ ಜೊತೆ ಸೆಣಸಾಡುತ್ತಾ, ಮಲೆನಾಡು ಭಾಗದಲ್ಲಿ ಕೃಷಿಯಲ್ಲಿ ಸಂತೃಪ್ತಿ ಕಾಣುತ್ತಿರುವ ಶ್ರಮಿಕ ಸಮುದಾಯ ನಿಮ್ಮದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಇಲ್ಲಿನ ಶಾಶ್ವತ ಧ್ವಜಸ್ತಂಭದ ಬಳಿ ಮಂಗಳವಾರ ಈಡಿಗ, ಬಿಲ್ಲವ, ನಾಮಧಾರಿ, ದೀವರು ೨೬ ಒಳಪಂಗಡಗಳ ಶಕ್ತಿಸಾಗರ ಸಂಗಮ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

ಕರ್ನಾಟಕದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿದಂತೆ ೨೬ ಪಂಗಡಗಳಿಗೆ ತಮ್ಮದೆ ಮಹತ್ವವಿದೆ. ಜನಾಂಗದ ಕುಲಗುರುಗಳಾದ ನಾರಾಯಣ ಗುರುಗಳು ಸಮುದಾಯವನ್ನು ಶೈಕ್ಷಣಿಕವಾಗಿ ಮುನ್ನೆಲೆಗೆ ತರಲು ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ. ಒಂದೇ ಜತಿ, ಒಂದೇ ಧರ್ಮ, ಒಬ್ಬನೇ ದೇವರು ಎನ್ನುವ ನಾರಾಯಣ ಗುರುಗಳ ತತ್ವ ಪಾಲಿಸಿದರೆ ಜಗತ್ತಿನ ಯಾವ ಶಕ್ತಿಯೂ ಭಾರತವನ್ನು ಎದುರಿಸಲು ಆಗುವುದಿಲ್ಲ ಎಂದು ತಿಳಿಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜರಿ ಮಾತನಾಡಿ, ಸೃಷ್ಟಿಕರ್ತ ಬ್ರಹ್ಮನ ನಂತರ ಆಧುನಿಕ ಸೃಷ್ಟಿಕರ್ತರು ನಾರಾಯಣ ಗುರುಗಳು. ರಾಜ್ಯದಲ್ಲಿ ನಮ್ಮ ಸಮುದಾಯಗಳಿಗೆ ಶಕ್ತಿ ತುಂಬಿದವರು ಬಿ.ಎಸ್. ಯಡಿಯೂರಪ್ಪನವರು. ಅಧಿಕಾರದಲ್ಲಿ ಇದ್ದಾಗಲೆಲ್ಲ ಸಮುದಾಯ ಬೇಕುಬೇಡಗಳಿಗೆ ಸ್ಪಂದಿಸಿದ್ದಾರೆ. ಇದೀಗ ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಅಪ್ಪನ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ನಮ್ಮ ಸಮುದಾಯಕ್ಕೆ ಬಿ.ಎಸ್.ಯಡಿಯೂರಪ್ಪನವರು ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ರಚನೆ ಮಾಡಿದ್ದ ಭಕ್ತವತ್ಸಲಂ ಸಮಿತಿ ಹಿಂದುಳಿದ ವರ್ಗಗಳಿಗೆ ಸಮಾನಹಕ್ಕು ನೀಡುವ ವರದಿ ನೀಡಿದೆ. ಆದರೆ ಕಾಂಗ್ರೇಸ್ ಸರ್ಕಾರ ಭಕ್ತವತ್ಸಲಂ ಸಮಿತಿ ವರದಿ ತಿರಸ್ಕಾರ ಮಾಡಿ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರ ತಕ್ಷಣ ವರದಿಯನ್ನು ಮರು ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ತಂದೆಯವರ ಹೋರಾಟದ ಬದುಕು ನನಗೆ ಪ್ರೇರಣೆಯಾಗಿದೆ. ಶಿವಮೊಗ್ಗ ತಾಳಗುಪ್ಪ ಬ್ರಾಡ್‌ಗೇಜ್ ನಿರ್ಮಾಣಕ್ಕೆ ಯಡಿಯೂರಪ್ಪನವರು ಕಾರಣ. ತುಮರಿ ಸೇತುವೆ ನಿರ್ಮಾಣಕ್ಕೆ ಮೂಲಪ್ರೇರಣೆ ಯಡಿಯೂರಪ್ಪನವರಾಗಿದ್ದಾರೆ. ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ಇದೊಂದು ಅಭಿಮಾನದ ಹಾಗೂ ಸಮುದಾಯ ಕೃತಜ್ಞತೆ ಸಲ್ಲಿಸುವ ಸನ್ಮಾನವಾಗಿದೆ. ಬಿ.ಎಸ್.ಯಡಿಯೂರಪ್ಪನವರು ಸರ್ವವ್ಯಾಪಿ, ಸರ್ವಸ್ಪರ್ಶಿ ಎನ್ನುವಂತೆ ಎಲ್ಲಾ ಸಮುದಾಯಗಳಿಗೂ ತಮ್ಮ ಆಡಳಿತ ಅವಧಿಯಲ್ಲಿ ಸಮಾನವಾಗಿ ಅಭಿವೃದ್ದಿ ಪಾಲು ಹಂಚಿದ್ದಾರೆ. ನಮ್ಮ ಸಮುದಾಯಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಸನ್ಮಾನಿಸುವ ಮೂಲಕ ನಮ್ಮನ್ನು ನಾವು ಗೌರವಿಸಿಕೊಂಡಂತೆ ಆಗುತ್ತದೆ ಎಂದರು.

ವೇದಿಕೆಯಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಅವಧೂತ ವಿನಯ ಗುರೂಜಿ, ಪ್ರಣವಾನಂದ ಸ್ವಾಮೀಜಿ, ಶಾಸಕರಾದ ಅರಗ ಜನೇಂದ್ರ, ಚನ್ನಬಸಪ್ಪ, ಭಾರತಿ ಶೆಟ್ಟಿ, ಉಮಾನಾಥ ಕೋಟ್ಯಾನ್, ಪ್ರಮುಖರಾದ ಮಾಲಿಕಯ್ಯ ಗುತ್ತೆದಾರ್, ಡಾ. ರಾಜನಂದಿನಿ ಕಾಗೋಡು, ರತ್ನಾಕರ ಹೊನಗೋಡು, ಪ್ರಶಾಂತ್ ಕೆ.ಎಸ್., ರಾಜಶೇಖರ ಗಾಳಿಪುರ, ಟಿ.ಡಿ.ಮೇಘರಾಜ್, ದೇವೇಂದ್ರಪ್ಪ ಇನ್ನಿತರರು ಹಾಜರಿದ್ದರು.

Abhi

Abhi

Leave a Reply

Your email address will not be published. Required fields are marked *