ಶಿವಮೊಗ್ಗ :- ಸೋಮಿನಕೊಪ್ಪ ಸಮೀಪದಲ್ಲಿರುವ ಪ್ರೆಸ್‌ಕಾಲೋನಿಯ ಶ್ರೀ ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ. 28ರಂದು 3ನೇ ವರ್ಷದ ಶ್ರೀ ದೊಡ್ಡಮ್ಮ ದೇವಿ ಕೆಂಡದಾರ್ಚನೆ ದೇವಾಲಯದ ಮುಂಭಾಗ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಸಂಚಾಲಕ ಎಂ.ಎನ್. ಸುಂದರ್‌ರಾಜ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ ೭ ಗಂಟೆಗೆ ಗಂಗಾಪೂಜೆ, 9.30ಕ್ಕೆ ಸಾವಿರ ಮಹಿಳೆಯರಿಂದ ಆರತಿ ಮೆರವಣಿಗೆ ನಂತರ ಶ್ರೀ ದೊಡ್ಡಮ್ಮದೇವಿ ಉತ್ಸವಮೂರ್ತಿ ಮೆರವಣಿಗೆ ನಡೆದು, 10ಗಂಟೆಯಿಂದ ಕೆಂಡದಾರ್ಚನೆ ನಡೆಯಲಿದೆ ಎಂದರು.
ಕೆಂಡದಾರ್ಚನೆ ಅಂಗವಾಗಿ ಜ. 27ರಂದು ಗಣಪತಿ ಪೂಜೆ, ಪುಣ್ಯಾಹವಾಚನ, ದೇವಿಯ ಆರಾಧನಾ ಪೂಜೆ ನಂತರ ಚಂಡಿಕಾ ಬೀಜಕ್ಷರ ಹೋಮ, ಬೆಳಿಗ್ಗೆ 8ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, 11ಕ್ಕೆ ರಾಧಾ ಎಂ.ಸಿದ್ದಪ್ಪಾಜಿ ಸಂಗ್ರಹಿಸಿರುವ ಸಿದ್ದಪ್ಪಾಜಿಯವರ ನುಡಿಮುತ್ತುಗಳ ಸಂಗ್ರಹ ‘ತಾಯಿನುಡಿ’ ಕೃತಿ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ನಿಟ್ಟೂರಿನ ವಿದ್ವಾಂಸರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಶಾಂತಾರಾಮ ಪ್ರಭು ಆಗಮಿಸಲಿದ್ದಾರೆ ಎಂದರು.
ಇದೇ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ರಮಣಮಹರ್ಷಿ ಆಶ್ರಮದ ಸಂಸ್ಥಾಪಕ ಬಿ. ಶ್ರೀನಿವಾಸ ರೆಡ್ಡಿ, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯ ಡಾ. ಪ್ರಸನ್ನ ಬಸವರಾಜಪ್ಪ, ಎಂ.ಡಿ.ಹಳ್ಳಿಯ ರಾಮಕೃಷ್ಣ ವಸತಿ ವಿದ್ಯಾಲಯ ಸಂಸ್ಥಾಪಕ ಡಿ.ಎಂ.ದೇವರಾಜ್, ಬೆಂಗಳೂರಿನ ಹಿರಿಯ ಭೂವಿಜನಿ ಡಾ. ವಾಸುದೇವ್ ಅವರನ್ನು ಸನ್ಮಾನಿಸಲಾಗುವುದು. ಅಧ್ಯಕ್ಷತೆ ವಹಿಸುವ ದೇವಿ ಉಪಾಸಕರಾದ ಸಿದ್ದಪ್ಪಾಜಿ ಅವರು ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಕೆಂಡಾದರ್ಚನೆಯಂದು ಎಲ್ಲಾ ಭಕ್ತರಿಗೆ ದೇವಿಯ ಭಂಡಾರ ಮತ್ತು 1 ರೂ. ನಾಣ್ಯ ಮತ್ತು ಲಡ್ಡು ಪ್ರಸಾದ ವಿತರಿಸಲಾಗುವುದು. ಅಮ್ಮನವರಿಗೆ ಮಡಲಕ್ಕಿ ಕೊಡಲು ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದರು. ಅಂದು ಬೆಳಿಗ್ಗೆ 8 ಗಂಟೆಯಿಂದಲೇ ನಗರದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ, ರಾತ್ರಿ ೬ಕ್ಕೆ ರುದ್ರಹೋಮ ಏರ್ಪಡಿಸಲಾಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಭಕ್ತರಾದ ಗಜೇಂದ್ರ ಕುಡಾಲ್ಕರ್, ನರಸಿಂಹಣ್ಣ, ಸಚಿನ್, ವಿಜಯ, ಮಧುಸೂದನ್, ರಮೇಶ್ ಉಪಸ್ಥಿತರಿದ್ದರು.