ಈಶ್ವರಪ್ಪ, ಸಂಸದ ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ :- ತಮ್ಮ ಮಗನಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ ಎಂದು ಪಕ್ಷೇತರವಾಗಿ ಸ್ಪರ್ಧಿಸಿರುವ ಈಶ್ವರಪ್ಪ ಅವರು ತಮ್ಮ ಮಗನಿಗಾಗಿ ಪಕ್ಷವನ್ನು ಹರಾಜು ಹಾಕುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಟಿಯಲ್ಲಿ ಟೀಕಿಸಿದರು.

ಕುಟಂಬ ಸ್ವಾರ್ಥಕ್ಕಾಗಿ ಚುನಾವಣೆಗೆ ಸ್ಪರ್ಧಿಸಿರುವ ಈಶ್ವರಪ್ಪ ಅವರಿಗೆ ಶಕ್ತಿ ಇದ್ದಲ್ಲಿ ಅವರ ಪರವಾಗಿ ದೊಡ್ಡ ನಾಯಕರನ್ನು ಪ್ರಚಾರಕ್ಕೆ ತರಲಿ ನೋಡೋಣ ಎಂದು ಸವಾಲು ಹಾಕಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ರನ್ನ ಡಮ್ಮಿ ಕ್ಯಾಂಡಿಡೇಟ್ ಎಂದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಗೀತಾ ತಂಟೆಗೆ ಬಂದರೆ ಸುಮ್ಮನಿರೊಲ್ಲ ಎಚ್ಚರಿಕೆಯಿಂದ ಮಾತನಾಡಿ ಎಂದು ವಾರ್ನಿಂಗ್ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮಾತನಾಡುತ್ತಿರುವ ನೀವು ಈ ಚುನಾವಣೆಯಲ್ಲಿ ಎಷ್ಟು ಓಟು ಪಡೆಯುತ್ತೀರಾ ನೋಡೋಣ. ೧೯೯೯ರಲ್ಲಿ ಕಾಂಗ್ರೆಸ್‌ನ ಹೆಚ್.ಎಂ. ಚಂದ್ರಶೇಖರಪ್ಪ ನಿಮ್ಮನ್ನು ಸೋಲಿಸಿದ್ದನ್ನು ಮರೆಯಬೇಡಿ. ಆಗ ನಾನು ಸಹ ನಿಮ್ಮ ವಿರುದ್ಧ ಚುನಾವಣೆ ಪ್ರಚಾರ ಮಾಡಿದ್ದೇ, ಈಗ ಲೋಕಸಭೆ ಚುನಾವಣೆಯಲ್ಲೂ ಅದೇ ಫಲಿತಾಂಶ ಬರುತ್ತದೆ. ಗೀತಕ್ಕ ನಿಮ್ಮ ವಿರುದ್ಧ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ತಾಳಿಯನ್ನು ಬೀದಿಗೆ ತಂದಿದ್ದಾರೆ. ಬಿಜೆಪಿ ನಾಯಕರು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದ ಅವರು, ಬಿಜೆಪಿ ಈ ಬಾರಿ ೪೦೦ ಸೀಟು ಗೆಲ್ಲುವುದಕ್ಕೆ ಪಾಕಿಸ್ತಾನದಲ್ಲೂ ಚುನಾವಣೆಗೆ ನಿಲ್ಲಬೇಕಾಗುವುದು ಎಂದು ಲೇವಡಿ ಮಾಡಿದರು.

ಬಿಜೆಪಿ ಜಾತಿ, ಧರ್ಮ ಹಾಗೂ ರಾಮನನ್ನು ಮುಂದಿಟ್ಟುಕೊಂಡು ಚುನಾವಣೆ ಮಾಡಿದರೆ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಬಿಜೆಪಿ ಕೆಟ್ಟ ರಾಜಕಾರಣ ಗೆಲ್ಲಲು ಸಹಕಾರಿಯಾಗುವುದಿಲ್ಲ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಈಗಾಗಲೇ ೩ವರೆ ಲಕ್ಷ ಜನರನ್ನು ನೇರವಾಗಿ ಭೇಟಿ ಮಾಡಿದ್ದಾರೆ. ಇನ್ನು ೧೨ ದಿನದಲ್ಲಿ ೪ ಲಕ್ಷ ಜನರನ್ನು ನೇರವಾಗಿ ಭೇಟಿ ಮಾಡಿ ಮತಯಾಚನೆ ಮಾಡುವರು. ಅಲ್ಲದೇ ಮುಂದೆ ರೋಡ್ ಶೋಗಳ ಮೂಲಕ ಜನರನ್ನು ತಲುಪಲಾಗು ವುದು. ಈ ಬಾರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಸೋಲಿಸುವುದು ಅಸಾಧ್ಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ ೪ ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬರಲಿದ್ದಾರೆ. ಭದ್ರಾವತಿ ಸೇರಿದಂತೆ ೨ ತಾಲೂಕು ಗಳಲ್ಲಿ ಪ್ರಚಾರ ನಡೆಸುವುದಾಗಿ ತಿಳಿಸಿದರು. ಸಿನಿಮಾ ತಾರೆಯರು ಈ ಚುನಾವಣೆಯಲ್ಲಿ ಗೀತಕ್ಕ ಪರ ಮತ ಯಾಚನೆ ಮಾಡುವರು. ದುನಿಯಾ ವಿಜಿ, ಡಾಲಿ ಧನಂಜಯ್ ಮತ್ತಿತರರು ಆಗಮಿಸುವರು. ನಾವು ಯಾರನ್ನು ಕರೆದಿಲ್ಲ,ಅವರೇ ಅಭಿಮಾನದಿಂದ ಬರುತ್ತಿದ್ದಾರೆ ಎಂದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಯೋಜನೆಗಳಿಂದ ಜಯ ಸಿಗಲಿದೆ. ಇದಕ್ಕಾಗಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಆಯನೂರು ಮಂಜುನಾಥ್, ಎನ್. ರಮೇಶ್, ಚಂದ್ರಭೂಪಾಲ್, ವೈ.ಹೆಚ್. ನಾಗರಾಜ್, ಮಂಜುನಾಥ್, ಚಿನ್ನಪ್ಪ ಮತ್ತಿತರರಿದ್ದರು.

Abhi

Abhi

Leave a Reply

Your email address will not be published. Required fields are marked *