ಶಿವಮೊಗ್ಗದಲ್ಲಿ ಗ್ಯಾರಂಟಿ ಪತ್ರಗಳನ್ನು ಮನೆ ಮನೆಗೆ ಹಂಚಿದ ಕಾಂಗ್ರೆಸ್

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಮುಖಂಡರು ಭಾನುವಾರ ನಗರದ ತಮ್ಮ ತಮ್ಮ ವಾರ್ಡ್ ಗಳಲ್ಲಿ ‘ನನ್ನ ಬೂತ್ ನನ್ನ ಜವಾಬ್ದಾರಿ’ ಧ್ಯೇಯ ವಾಕ್ಯದ ಅಡಿಯಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಪತ್ರಗಳನ್ನು ಮನೆ ಮನೆಗೆ ಹಂಚುವ ಮೂಲಕ ಭರ್ಜರಿ ಪ್ರಚಾರ ಮಾಡಿದರು.

ಕಾಂಗ್ರೆಸ್ ನ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಗಳ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಚಾರ ಚುರುಕುಗೊಳಿಸುವಂತೆ ಮತ್ತು ಸಚಿವರಾದಿಯಾಗಿ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಸಂದೇಶ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ಇಂದು ಇಡೀ ಶಿವಮೊಗ್ಗ ನಗರದಲ್ಲಿ ಪ್ರಚಾರ ಕಾರ್ಯ ಚುರುಕುಗೊಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮುಖಂಡರಾದ ಎಂ. ಶ್ರೀಕಾಂತ್, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ರಮೇಶ್ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಬ್ಲಾಕ್ ಅಧ್ಯಕ್ಷರಾದ ಕಲೀಂ ಪಾಷಾ, ಶಿವಕುಮಾರ್, ವಾರ್ಡ್ ಅಧ್ಯಕ್ಷರಾದ ನಾಜೀಮಾ, ಕೆಪಿಸಿಸಿ ಸಂಯೋಜಕಿ ನೇತ್ರಾವತಿ, ನಗರ ಪಾಲಿಕೆ ಮಾಜಿ ಸದಸ್ಯರಾದ, ನಾಗರಾಜ್ ಕಂಕಾರಿ ಹೆಚ್.ಸಿ. ಯೋಗೀಶ್, ಪಾಲಾಕ್ಷಿ, ಪ್ರಮುಖರಾದ ಕೆ. ರಂಗನಾಥ್, ಮಂಜುನಾಥ್ ಬಾಬು, ಎಸ್.ಟಿ. ಚಂದ್ರಶೇಖರ್, ಶಿ.ಜು. ಪಾಷಾ, ಮಾರ್ಟಿನ್, ಶಿವಾನಂದ್, ಕಾಶಿ ವಿಶ್ವನಾಥ್, ರಾಜಶೇಖರ್ ಸೇರಿದಂತೆ ಹಲವು ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಇವರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಸೇರಿಕೊಂಡು ಪ್ರತಿ ಮನೆ ಮನೆಗೂ ಹೋಗಿ ಕಾಂಗ್ರೆಸ್ ನ ಗ್ಯಾರಂಟಿ ಪತ್ರಗಳನ್ನು ನೀಡಿ ಕಾಂಗ್ರೆಸ್ ಗೆ ಮತ ನೀಡುವಂತೆ ವಿನಂತಿಸಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಘೋಷಣೆ ಮಾಡಿರುವ ಮಹಾಲಕ್ಷ್ಮಿ, ಯುವ ಬೆಳಕು, ಸಾಲ ಮನ್ನಾ, ಕನಿಷ್ಟ ಕೂಲಿ, ಕನಿಷ್ಟ ಬೆಂಬಲ ಬೆಲೆ ಮುಂತಾದ 25 ಗ್ಯಾರಂಟಿಗಳ ಜೊತೆಗೆ ರಾಜ್ಯ ಸರ್ಕಾರದ 5 ಗ್ಯಾರಂಟಿಗಳನ್ನೂ ಒಳಗೊಂಡಂತೆ ಇರುವ ಗ್ಯಾರಂಟಿ ಪತ್ರಗಳನ್ನು ಮನೆ ಮನೆಗೆ ತಲುಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಲ್ಲಾ ಮುಖಂಡರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಿ ಗ್ಯಾರಂಟಿಗಳ ಲಾಭ ಪಡೆಯಿರಿ ಎಂದು ಮನವಿ ಮಾಡಿದರಲ್ಲದೇ, ರಾಜ್ಯ ಸರ್ಕಾರದ ಗ್ಯಾರಂಟಿಗಳು ತಲುಪುತ್ತಿವೆಯೇ ಎಂದು ಕೇಳುತ್ತಾ ಸಾಗಿದರು.

ಮತ ಕೇಳುವಾಗ ಜನರು ತಮ್ಮ ಸ್ಥಳೀಯ ಸಮಸ್ಯೆಗಳನ್ನು ಅವರ ಮುಂದೆಯೇ ಬಿಚ್ಚಿಟ್ಟರು. ಮುಖಂಡರು ತಕ್ಷಣವೇ ಪರಿಹರಿಸುವುದಾಗಿ ತಿಳಿಸಿದರಲ್ಲದೇ, ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮೂಲಕವೇ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಒಟ್ಟಾರೆ ಕಾಂಗ್ರೆಸ್ ತನ್ನ ಮತ ಬೇಟೆಯನ್ನು ಚುರುಕಾಗಿಸಿಕೊಂಡು ಇದೀಗ ಬೂತ್ ಮಟ್ಟಕ್ಕೆ ತಲುಪಿದೆ. ಮತ್ತು ಪ್ರತಿ ವಾರ್ಡ್ ನಲ್ಲೂ ಕೂಡ ಮತಗಳ ಕ್ರೂಡೀಕರಣಕ್ಕೆ ಸಂಘಟನಾತ್ಮಕವಾಗಿ ಹೆಜ್ಜೆ ಹಾಕಿದೆ.

Abhi

Abhi

Leave a Reply

Your email address will not be published. Required fields are marked *