ಶಿವಮೊಗ್ಗ :- ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ (ಮನರೇಗಾ) ಹೆಸರು ಬದಲಾಯಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಾಗೂ ನರೇಗಾ ಯೋಜನೆಯನ್ನೇ ಪುನರ್ ಸ್ಥಾಪಿಸಲು ಆಗ್ರಹಿಸಿ ಇಂದು ನಗರದ ಗಾಂಧಿಪಾರ್ಕಿನಲ್ಲಿ ಗಾಂಧಿಪ್ರತಿಮೆಯ ಬಳಿ ಜಿಲ್ಲಾ ಕಾಂಗ್ರೆಸ್‌ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಪ್ರತಿಭಟನಾ ಸಭೆ ನಡೆಸಿ, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು. ಜನರಿಗೆ ಕೆಲಸ ನೀಡಿ, ಅವರುಗಳು ಜೀವನೋಪಾಯಕ್ಕೆ ಅನುಕೂಲ ಮಾಡಿಕೊಟ್ಟಿರುವ ಉದ್ಯೋಗಖಾತ್ರಿ ಯೋಜನೆಯನ್ನು ಮೋದಿ ಸರ್ಕಾರ ಮೊಟಕುಗೊಳಿಸಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು, ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ನಿಗಮ ಮಂಡಳಿಗಳ ಅಧ್ಯಕ್ಷರುಗಳಾದ ಕೆ. ಚೇತನ್‌ಗೌಡ, ಜಿ. ಪಲ್ಲವಿ, ಇಸ್ಮಾಯಿಲ್‌ಖಾನ್, ಶ್ವೇತಾಬಂಡಿ ಸೇರಿದಂತೆ ಹಲವು ಮುಖಂಡರು ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಪ್ರತಿಭಟನಾ ಭಾಷಣ ಮಾಡಿದರು.
ನರೇಗಾ ಯೋಜನೆಯಿಂದ ಮಹತ್ಮಾಗಾಂಧೀಜಿ ಹೆಸರು ಬಿಟ್ಟಿರುವುದು ದ್ವೇಷದ ರಾಜಕಾರಣವಾಗಿದೆ. ಕೇಂದ್ರ ಸರ್ಕಾರದ ಕೀಳುಮಟ್ಟದ ರಾಜಕಾರಣವಿದು. ಬಿಜೆಪಿಯವರಿಗೆ ಮೊದಲಿನಿಂದಲೂ ಗಾಂಧೀಜಿಯವರನ್ನು ಕಂಡರೆ ಆಗುವುದಿಲ್ಲ. ಆದ್ದರಿಂದ ಆ ಹೆಸರನ್ನು ಕೈಬಿಟ್ಟು ವಿಬಿಜಿ ರಾಮ್-ಜಿ ಹೆಸರು ಇಟ್ಟಿದೆ. ಮತ್ತು ಈ ಹೆಸರು ಇಟ್ಟಿದ್ದನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಇದು ಸರಿಯಲ್ಲ ಮಹಾಪುರಷರ ಹೆಸರನ್ನು ತೆಗೆದು ಹಾಕುವುದು ಅವಮಾನಕರವಾದ ಸಂಗತಿ ಎಂದು ಕಾಂಗ್ರೆಸ್ ಮುಖಂಡರು ದೂರಿದರು.
ಯುಪಿಎ ಸರ್ಕಾರ ಇದ್ದಾಗ ಮಹಾತ್ಮಾಗಾಂಧಿ ಹೆಸರಲ್ಲಿ ಮನರೇಗಾ ಉದ್ಯೋಗಖಾತ್ರಿ ಯೋಜನೆಯನ್ನು ಜರಿಗೆ ತರಲಾಗಿತ್ತು. ಈಗ ಈ ಯೋಜನೆಯ ಸ್ವರೂಪವನ್ನೇ ಬದಲಾಯಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇದರಿಂದ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತದೆ. ಕನಿಷ್ಠವೇತನ ರಕ್ಷಣೆಯಿಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಕಾರ್ಮಿಕರ ಶೋಷಣೆಯಾಗುತ್ತದೆ. ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಮುಖವಾಗುತ್ತದೆ. ಪಂಚಾಯ್ತಿಗಳ ಅಧಿಕಾರವನ್ನು ಕಸಿದುಕೊಳ್ಳಲಾಗುತ್ತದೆ. ಗ್ರಾಮ ಪಂಚಾಯ್ತಿಗಳು ಕೇವಲ ಅನುಷ್ಠಾನಗೊಳಿಸುವ ಸಂಸ್ಥೆಗಳಾಗಿ ಮಾರ್ಪಡುತ್ತವೆ. ಇದರಿಂದ ಅಧಿಕಾರವೇ ಮೊಟಕುಗೊಳಿಸುತ್ತದೆ. ಇದು ವಲಸೆಗೂ ಕಾರಣವಾಗುತ್ತದೆ. ಗ್ರಾಮೀಣ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ದೂರಿದರು.
ಉಪವಾಸ ಸತ್ಯಾಗ್ರಹದಲ್ಲಿ ಪ್ರಮುಖರಾದ ಎಸ್.ಟಿ. ಹಾಲಪ್ಪ, ಹೆಚ್.ಸಿ. ಯೋಗೀಶ್, ಎಸ್.ಟಿ. ಚಂದ್ರಶೇಖರ್, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ರಮೇಶ್ ಶಂಕರಘಟ್ಟ, ಕೆ. ರಂಗನಾಥ್, ಹರ್ಷಿತ್‌ಗೌಡ, ಹೆಚ್.ಪಿ. ಗಿರೀಶ್, ಶ್ರೀನಿವಾಸ್ ಕರಿಯಣ್ಣ, ಖಲೀಂ ಪಾಷಾ, ಚಿನ್ನಪ್ಪ, ಶಿವಕುಮಾರ್, ಮಂಜುನಾಥ್ ಬಾಬು, ಹೆಚ್.ಎಂ. ಚಂದ್ರಶೇಖರಪ್ಪ, ಬಸವರಾಜ್, ಸೈಯದ್ ವಾಹಿದ್ ಅಡ್ಡು, ಕಲಗೋಡು ರತ್ನಾಕರ್, ಶಿ.ಜು. ಪಾಷಾ, ರವಿಕುಮಾರ್, ಎಸ್.ಪಿ. ಶೇಷಾದ್ರಿ, ಪುಷ್ಪಾಶಿವಕುಮಾರ್, ವಿಶ್ವನಾಥ್‌ಕಾಶಿ, ಅರ್ಚನಾ ನಿರಂಜನ್, ಸ್ಟೆಲ್ಲಾ ಮಾರ್ಟಿನ್, ಯಮುನಾ ರಂಗೇಗೌಡ, ನಾಜಿಮಾ, ನಿರಂಜನ್, ಮಧುಸೂದನ್, ವಿಜಯ್, ಚರಣ್, ಗಿರೀಶ್, ರವಿಕಟಿಕೆರೆ ಭಾಗವಹಿಸಿದ್ದರು.