ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಕೆ : ಜನ ಸಾಗರದ ನಡುವೆ ಬೃಹತ್ ಮೆರವಣಿಗೆ : ರಾರಾಜಿಸಿದ ಬಿಜೆಪಿ, ಜೆಡಿಎಸ್ ಬಾವುಟಗಳು

ಶಿವಮೊಗ್ಗ :- ಅಪಾರ ಜನಸಾಗರದ ನಡುವೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ಅವರು ಇಂದು ನಾಮಪತ್ರ ಸಲ್ಲಿಸಿದರು.

ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೃಹತ್ ಮೆರವಣಿಗೆಯಲ್ಲಿ ಸಾಗಿ ಬಂದರು.

ಇದಕ್ಕೂ ಮೊದಲು ನಗರದ ರಾಘವೇಂದ್ರ ಮಠಕ್ಕೆ ಭೇಟಿ ವಿಶೇಷ ಪೂಜೆ ನೆರವೇರಿಸಿದರು. ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಆರಂಭವಾದ ಮೆರವಣಿಗೆಗೆ ಜನಪದ ಕಲಾತಂಡಗಳು ಮೆರುಗು ನೀಡಿದರು.

ಸಾವಿರಾರು ಕಾರ್ಯಕರ್ತರು ಮೋದಿ, ಬಿಜೆಪಿ ಯಡಿಯೂರಪ್ಪ, ಕುಮಾರಸ್ವಾಮಿ, ರಾಘವೇಂದ್ರ ಅವರ ಪರ ಘೋಷಣೆ ಕೂಗಿದರು. ಮೆರವಣಿಗೆ ಭರ್ಜರಿಯಾಗಿ ಸಾಗಿತ್ತು. ಎಂದಿನಂತೆ ಕೇಸರಿ ಧ್ವಜಗಳು, ಬಿಜೆಪಿ, ಜೆಡಿಎಸ್ ಬಾವುಟಗಳು ರಾರಾಜಿಸಿದವು.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಸೇರಿದಂತೆ ಎಲ್ಲಾ ತಾಲೂಕು, ಹೋಬಳಿ, ಗ್ರಾಮ ಮಟ್ಟದಿಂದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಇಡೀ ಕ್ಷೇತ್ರದಿಂದ ನೂರಾರು ಬಸ್ ಗಳಲ್ಲಿ ಕಾರ್ಯಕರ್ತತು ಆಗಮಿಸಿದ್ದರು. ಬಿಸಿಲಿನ ಝಳ ಇದ್ದರೂ ಅದನ್ನು ಲೆಕ್ಕಿಸದೇ ಜನ ಮೆರವಣಿಗೆಯಲ್ಲಿ ಸಾಗಿ ಬಂದರು. ನೆರಳಿರುವ ಕಡೆ ಅನೇಕರು ಆಶ್ರಯ ಪಡೆದರು. ಅಲ್ಲಲ್ಲಿ ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಗೋಪಿ ವೃತ್ತದ ಬಳಿ ಇರುವ ಕಸ್ತೂರಾಬಾ ಕಾಲೇಜ್ ಮುಂಭಾಗದಲ್ಲಿ ಶಾಮಿಯಾನದ ಮೂಲಕ ನೆರಳಿನ ವ್ಯವಸ್ಥೆ ಮಾಡಲಾಗಿತ್ತು ಸಭೆ ಕೂಡ ನಡೆಸಲಾಯಿತು. ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯ ಜನ ಸೇರಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು. ಸುಮಾರು ೫೦ ಸಾವಿರ ಜನ ಸೇರಿದ್ದರು.

ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ, ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ್, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಸಿ.ಟಿ. ರವಿ, ಹರತಾಳು ಹಾಲಪ್ಪ, ಶಾಸಕರಾದ ಆರಗ ಜನೇಂದ್ರ, ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ ಮೊದಲಾದವರು ಇದ್ದರು.

ಜಿಲ್ಲಾಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಂಸದ ರಾಘವೇಂದ್ರ ಅವರೊಂದಿಗೆ ಅಶೋಕ್ ನಾಯ್ಕ್, ರುದ್ರೇಗೌಡ, ಆರಗ ಜನೇಂದ್ರ ಮೊದಲಾದವರಿದ್ದರು.

ಎರಡನೇ ಸೆಟ್ ನಾಮಪತ್ರ ಸಲ್ಲಿಸುವಾಗ ರಾಘವೇಂದ್ರ ದಂಪತಿಯೊಂದಿಗೆ ಶಾರದಾ ಪೂರ್ಯಾನಾಯ್ಕ್, ಭಾನುಪ್ರಕಾಶ್, ಹೆಚ್. ಹಾಲಪ್ಪ ಇದ್ದರು.

Abhi

Abhi

Leave a Reply

Your email address will not be published. Required fields are marked *