Flowers in Chania

ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ : ಸುಂದರೇಶ್ ಅಭಿನಂದನೆ

ಶಿವಮೊಗ್ಗ :- ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯಾಗಲಿರುವ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿರುವ ಸರ್ಕಾರಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅಭಿನಂದಿಸಿದರು.

ಇಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಚಿವರಿಗೆ ಅಭಿನಂದಿಸಿದರು.

ಆರ್ಥಿಕವಾಗಿ ಸಂಕಷ್ಟಕ್ಕೀಡಾದವರಿಗೆ, ನಿರುದ್ಯೋಗಿಗಳಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ವರಿಷ್ಠ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ರಾಜ್ಯಾದ್ಯಂತ ಪ್ರವಾಸ ಮಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಭರವಸೆ ನೀಡಿದಂತೆ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಮೊದಲ ಭರವಸೆಯಾಗಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ಗ್ಯಾರಂಟಿ ಭರವಸೆಯಂತೆ ಗೃಹಜ್ಯೋತಿ ಯೋಜನೆ ಆ.1ರಿಂದ ಜಾರಿಗೆ ಬರಲಿದ್ದು, ಈಗಾಗಲೇ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಯೋಜನೆಯ ಲಾಭ ಪಡೆಯುವ ಬಗ್ಗೆ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ರಾಜ್ಯದ ಎಲ್ಲಾ ಗೃಹಬಳಕೆದಾರರಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯಂತೆ ಪ್ರತಿ ಮನೆಯ ಯಜಮಾನಿಗೆ 2ಸಾವಿರ ರೂ. ಪ್ರತಿ ತಿಂಗಳು ಸಿಗಲಿದೆ. ಈ ಯೋಜನೆ ಆ. 15ರಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಬೇಕಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪಠ್ಯ ಪುಸ್ತಕದಲ್ಲಿ ಭಾರೀ ವ್ಯತ್ಯಾಸಗಳಿದ್ದು, ಇದನ್ನು ಮರು ಪರಿಷ್ಕರಣೆ ಮಾಡಿ ಸಚಿವರು ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಲು ಯತ್ನಿಸಬೇಕು ಎಂದು ಮನವಿ ಮಾಡಿಕೊಂಡರು.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಬಹಳಷ್ಟು ಆರೋಪಗಳಿವೆ. ಇವುಗಳ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದೆ. ಹಾಗೂ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ಗಮನಕ್ಕೆ ತರಲಾಗಿದೆ. ಸಚಿವರು ಆಸ್ಪತ್ರೆ ಸುಧಾರಣೆ ತರಲಿದ್ದಾರೆ ಎಂಬ ಭರವಸೆ ಇದೆ ಎಂದರು.

ಎಲ್ಲಾ ಇಲಾಖೆಗಳ ಸಚಿವರು ಜಿಲ್ಲೆಯ ಪ್ರವಾಸ ಮಾಡಿ, ಇಲಾಖೆಗಳಲ್ಲಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕ ಆಡಳಿತ ತರುವುದರ ಜೊತೆಗೆ ಸುಧಾರಣೆ ತರಬೇಕು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಮೆಹಕ್ ಶರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಲಿಂ ಪಾಶಾ, ಪ್ರಮುಖರಾದ ಮಂಜುನಾಥ ಬಾಬು, ತಿಮ್ಮರಾಜ್, ಚಂದನ್ ಮತ್ತಿತರರು ಉಪಸ್ಥಿತರಿದ್ದರು.

Abhi

Abhi

Leave a Reply

Your email address will not be published. Required fields are marked *