Flowers in Chania

ಸನ್ಮಾರ್ಗದ ಬೋಧನೆ ಮಾಡುವಾತ ನಿಜವಾದ ಗುರು : ಅನುಗ್ರಹ ಸಂದೇಶ ನೀಡಿದ ಶ್ರೀ ಸತ್ಯಾತ್ಮ ತೀರ್ಥರು

ಹೊಳೆಹೊನ್ನೂರು :- ಮೃತ್ಯು, ನರಕ ಮತ್ತು ತಮಸ್ಸಿಗೆ ಕಾರಣವಾಗುವ ಮಾರ್ಗದಲ್ಲಿ ನಾವಿದ್ದಾಗ ಯಾರು ಅದನ್ನು ತಪ್ಪಿಸುವುದಿಲ್ಲವೋ ಅಥವಾ ತಿಳುವಳಿಕೆ ಹೇಳುವುದಿಲ್ಲವೋ ಆತ ತಂದೆ, ಗುರು ಅಥವಾ ರಾಜನಾಗಲು ಸಾಧ್ಯವಿಲ್ಲ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗ ಳವರು ಹೇಳಿದರು.

28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗ ಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.

ನಾವು ತಪ್ಪು ದಾರಿಯಲ್ಲಿದ್ದಾಗ ನಮಗೆ ಸನ್ಮಾರ್ಗದ ಬೋಧನೆ ಮಾಡಬೇಕು. ಅದು ಬಿಟ್ಟು ನೀನು ಮಾಡಿದ್ದೇ ಸರಿ. ನಿನ್ನ ಇಷ್ಟಕ್ಕೆ ಬಂದ ಹಾಗೆ ಇರು. ಬಂದ ಎಲ್ಲ ಅನರ್ಥ ವನ್ನೂ ನಾನು ನೋಡಿಕೊಳ್ಳುತ್ತೇನೆ. ನನ್ನ ಬಳಿ ಬೇಕಾದಷ್ಟು ಸಂಪತ್ತು ಇದೆ ಎಂದು ಪೋಷಿಸಿದರೆದು ಅನರ್ಥಕ್ಕೆ ಕಾರಣವಾಗುತ್ತದೆ ಎಂದರು.

ಯಾರಿಗೆ ಯಾವುದು ಹಿತವಾಗು ತ್ತದೆಯೋ ಅದನ್ನು ಹೇಳಬೇಕೇ ಹೊರತು ವ್ಯಕ್ತಿಯ ಮೆಚ್ಚಿಸಲು ಮಾಡಿದ್ದನ್ನೆಲ್ಲಾ ಸರಿ ಎನ್ನಬಾರದು. ಹೀಗಾಗಿ ನಾವು ತಪ್ಪು ಮಾಡಿದಾಗ ತಿದ್ದುವ ಮತ್ತು ಶಾಸ್ತ್ರ ವಿಹಿತವಾಗಿ ಬದುಕಿದಾಗ ಪೊರೆವ ಭಗವಂತನೇ ನಮಗೆ ಸರಿಯಾದ ಗುರು ಎನಿಸಿದ್ದಾನೆ. ಇಂತಹ ಭಗವಂತ ಎಲ್ಲರ ಹೃದಯ ದಲ್ಲಿದ್ದಾನೆ. ಹೀಗಿರುವಾಗ ಯಾರೂ ಬಡವರಲ್ಲ, ದುರ್ಬಲರಲ್ಲ. ಕಷ್ಟ ಬಂದಾಗ ಒಳಗಿರುವ ಪರಮಾತ್ಮನನ್ನು ಎಬ್ಬಿಸಿ. ಅವನಿಗೆ ಶರಣುಹೋಗಿ. ಅನಂತ ಜೀವರಾಶಿಯಲ್ಲಿದ್ದೂ ಅವರ ಯೋಗಕ್ಷೇಮ ನೋಡುವಾತ ಭಗವಂತನೊಬ್ಬನೇ ಎಂದರು.

ಪಂಡಿತ ಜೀವೇಶಾಚಾರ್ಯ ಸಭಾ ಕಾರ್ಯಕ್ರಮದ ಆರಂಭದಲ್ಲಿ ಪ್ರವಚನ ಮಾಡಿದರು. ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ವಿದ್ಯಾಧೀಶಾಚಾರ್ಯ ಗುತ್ತಲ, ಬಾಳಗಾರು ಜಯತೀರ್ಥಾಚಾರ್ಯ, ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರು ಷೋತ್ತಮಾಚಾರ್ಯ ಮೊದಲಾದವ ರಿದ್ದರು. ರಘೂತ್ತಮಾಚಾರ್ಯ ಸಂಡೂರು ನಿರೂಪಿಸಿದರು.

ದಕ್ಷಿಣಾಯನ ಪರ್ವ ಕಾಲದಲ್ಲಿ ದಂಡ ಸ್ನಾನ

ಸೋಮವಾರ ದಕ್ಷಿಣಾಯನ ಪರ್ವ ಪುಣ್ಯಕಾಲ ಇದ್ದ ಕಾರಣ ಶ್ರೀಗಳು ಭದ್ರಾ ನದಿಯಲ್ಲಿ ದಂಡ ಸ್ನಾನ ಮಾಡಿದರು. ಈ ವೇಳೆ ನೆರೆದಿದ್ದ ನೂರಾರು ಭಕ್ತರಿಗೆ ದಂಡೋದಕ ಮತ್ತು ತಮ್ಮ ಗುರುಗಳಾ ಶ್ರೀ ಸತ್ಯಪ್ರಮೋದ ತೀರ್ಥರ ಪಾದುಕೆಗಳ ಪಾದೋದಕವನ್ನು ಪ್ರೋಕ್ಷಣೆ ಮಾಡಿದರು. ಪರ್ವ ಕಾಲದ ನಿಮಿತ್ತ ಸಂಸ್ಥಾನ ದೇವರ ಪೂಜೆಯನ್ನು ಸಂಜೆ ನೆರವೇರಿಸಲಾಯಿತು. ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದರ ಮೂಲ ಬೃಂದಾವನದ ಎದುರು ಶ್ರೀಗಳು ಸ್ವಯಂ ಪಂಚ ತಪ್ತ ಮುದ್ರಾಧಾರಣೆಯನ್ನು ಮಾಡಿಕೊಂಡರು. ಯತಿಗಳಿಗೆ ಹಸ್ತೋದಕ ಇರದ ಕಾರಣ ಶ್ರೀಪಾದಂಗಳವರು ಉಪವಾಸವಿದ್ದರು.

Abhi

Abhi

Leave a Reply

Your email address will not be published. Required fields are marked *