Flowers in Chania

ಫಲಾನುಭವಿಗಳು ಚಿಂತೆ ಮಾಡುವ ಅಗತ್ಯವಿಲ್ಲ : ಇನ್ನು 4ವರ್ಷ ಅಲ್ಲ, ಗ್ಯಾರಂಟಿ ಯೋಜನೆಗಳು ನಿರಂತರ ನಡೆಯುತ್ತವೆ : ಡಿ.ಕೆ. ಶಿವಕುಮಾರ್

ಶಿವಮೊಗ್ಗ:- ಲೋಕಸಭೆ ಚುನಾವಣೆ ನಂತರ ರಾಜ್ಯದ ಗ್ಯಾರೆಂಟಿ ಯೋಜನೆ ಕೊನೆಯಾಗುವುದು ಎಂದು ಹರಿದಾಡುತ್ತಿರುವ ಸುದ್ದಿಗೆ ಫಲಾನುಭವಿಗಳು ಚಿಂತೆ ಮಾಡುವ ಅಗತ್ಯವಿಲ್ಲ. ಇನ್ನು 4 ವರ್ಷವಲ್ಲ, ಮುಂದೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯುತ್ತದೆ. ಗ್ಯಾರಂಟಿ ಯೋಜನೆಗಳು ನಿರಂತರ ನೀಡುತ್ತವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಫ್ರೀಡಂ ಪಾರ್ಕ್‌ನಲ್ಲಿ ( ಅಲ್ಲಮಪ್ರಭು ಮೈದಾನ) ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುವಭಿಗಳ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಐದು ಬೆರಳುಗಳು ಐದು ಗ್ಯಾರಂಟಿ ರೀತಿ ಕಾಂಗ್ರೆಸ್‌ನ ಹಸ್ತಕ್ಕೆ ಶಕ್ತಿ ತುಂಬಿದೆ. ಕಾಂಗ್ರೆಸ್ ಜಾತಿ ಆಧಾರದ ಮೇಲೆ ಗ್ಯಾರಂಟಿ ಯೋಜನೆಗಳನ್ನು ನೀಡಿಲ್ಲ, ನೀತಿ ಆಧಾರದ ಮೇಲೆ ಬಡವರನ್ನು ಮೇಲೆತ್ತಲು ಯೋಜನೆಗಳನ್ನು ನೀಡಿದೆ. ಇದು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು.

ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ೧ವರೆ ಕೋಟಿ ಮನೆಗಳು ಪಡೆಯುತ್ತಿವೆ. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಹಣವನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರರೂಗಳನ್ನು ರಾಜ್ಯದ 1.10ಕೋಟಿ ಮಹಿಳೆಯರಿಗೆ, ಯುವನಿಧಿ ಯೋಜನೆಯಡಿ ಉದ್ಯೋಗ ಅರಸುವ ಪದವಿಧರರಿಗೆ 3 ಸಾವಿರರೂ ನೀಡುವ ಯೋಜನೆಯಡಿ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನೀಡಲಾಗುವುದು ಎಂದರು.

ಕಾಂಗ್ರೆಸ್ ಜನರ ಬದುಕಿಗಾಗಿ ಯೋಜನೆಗಳನ್ನು ನೀಡುತ್ತದೆ. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ. ಬಡತನ ನಿರ್ಮೂಲನೆ ನಮ್ಮ ಉದ್ದೇಶ. ಇಂತಹ ಒಂದು ಯೋಜನೆಯನ್ನು ಬಿಜೆಪಿಯವರು ನೀಡಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿ ಯಾವ ವಿಷಯ ಹಿಡಿದು ಜನರ ಬಳಿ ಲೋಕಸಭೆ ಚುನಾವಣೆಗೆ ಮತ ಕೇಳಲು ಹೋಗುತ್ತದೆಯೋ ಗೊತ್ತಿಲ್ಲ. ರಾಮಮಂದಿರ ಕಟ್ಟಿದ್ದು ನಾವು ಎಂಬುದು ಅವರ ಮುಖ್ಯ ವಿಷಯವಾಗಿದೆ ಆದರೆ ರಾಮಮಂದಿರದಲ್ಲಿ ಮೊದಲು ಪೂಜೆ ಆರಂಭಿಸಿದ್ದು ರಾಜೀವ್‌ಗಾಂಧಿ ಆಡಳಿತದಲ್ಲಿ,ಆದರೆ ಧರ್ಮದ ಹೆಸರಲ್ಲಿ ನಾವು ರಾಜಕಾರಣ ಮಾಡುವುದಿಲ್ಲ ಎಂದರು.

ಶಿವಪ್ಪನಾಯಕ ಆಳಿದ ನಾಡು, ಕುವೆಂಪುರವರ ಜನ್ಮಬೀಡು, ವಿದ್ಯಾರ್ಥಿಯಾಗಿದ್ದಾಗ ಸಮಾಜವಾದಿ ಬೀಡಿನಲ್ಲಿ ಕಾಗೋಡು, ಕೊಣಂದೂರು ಲಿಂಗಪ್ಪ, ಬಂಗಾರಪ್ಪನವರ ಹೋರಾಟ ನೋಡಿದ್ದೇನೆ ಹೆಚ್ಚು ಮುಖ್ಯ ಮಂತ್ರಿಗಳನ್ನು ನೀಡಿದ ಜಿಲ್ಲೆ ಶಿವಮೊಗ್ಗ. ಬಂಗಾರಪ್ಪನವರ ಶಿಷ್ಯಎಂದು ಸ್ಮರಿಸಿದರು.

ಋಣತೀರಿಸುವಲ್ಲಿ ತಾಯಂದಿರು ಎತ್ತಿದ ಕೈ, ಅದೇ ರೀತಿ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರಂಟಿ ಕಾರ್ಡ್‌ನಂತೆ ಈಗ ರಾಜ್ಯದಲ್ಲಿ ಅಧಿಕಾರ ಹಿಡಿದ ನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದ ಜನರ ಋಣ ತೀರಿಸುತ್ತಿದೆ. ಎಲ್ಲಾ ಐದು ಗ್ಯಾರಂಟಿಗಳನ್ನು ಈಡೇರಿಸಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ರಾಜ್ಯದ ಮಹಿಳೆಯರು ಮತನೀಡಿ ಗೆಲ್ಲಿಸಿದ ಸರ್ಕಾರ ಇದು. ಸಿದ್ದರಾಮಯ್ಯನವರ ಖಜಾನೆ ಯಾವತ್ತೂ ಖಾಲಿಯಾಗಲ್ಲ, ಈ ಬಾರಿ ಬಜೆಟ್‌ನಲ್ಲಿ 44 ಸಾವಿರಕೋಟಿ ಶಿಕ್ಷಣ ಇಲಾಖೆಗೆ ನೀಡಿದ್ದಾರೆ. ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ ಎಂದರು.

ಬಂಗಾರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದರು, ಈಗ ಎಲ್ಲಾ ಮನೆಗಳಿಗೆ ಉಚಿತ ವಿದ್ಯುತ್‌ನ್ನು ಸಿದ್ದರಾಮಯ್ಯ ಸರ್ಕಾರ ನೀಡುತ್ತಿದೆ. ಪ್ರತಿ ಮಹಿಳೆಗೆ 2 ಸಾವಿರರೂ ನೀಡಲಾಗುತ್ತಿದೆ. ಈ ಸರ್ಕಾರಕ್ಕೆ ನೀವು ಇನ್ನೂ ಹೆಚ್ಚಿನ ಶಕ್ತಿ ತುಂಬಬೇಕು ಎಂದರು.

ಸಮಾವೇಶದಲ್ಲಿ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಶಾಸಕರಾದ ಸಂಗಮೇಶ್, ಶಾರದಾ ಪೂರ್‍ಯನಾಯ್ಕ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಪ್ರಮುಖರಾದ ಆರ್.ಎಂ. ಮಂಜುನಾಥಗೌಡ, ಎಂ. ಶ್ರಿಕಾಂತ್, ಹೆಚ್.ಸಿ. ಯೋಗೀಶ್, ದೇವೇಂದ್ರಪ್ಪ, ಜಿ.ಡಿ. ಮಂಜುನಾಥ್, ಚಿನ್ನಪ್ಪ ಮತ್ತಿತರರಿದ್ದರು.

Abhi

Abhi

Leave a Reply

Your email address will not be published. Required fields are marked *